ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ಆರೋಗ್ಯ ತಪಾಸಣೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.62 ವರ್ಷದ ಪರಿಕರ್ ಪ್ರಸ್ತುತ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ಯಾಂಕ್ರಿಯಾಟಿಕ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ದೆಹಲಿಗೆ ಸುಮಾರು 10.30 ಕ್ಕೆ ಅವರು ವಿಶೇಷ ವಿಮಾನದಿಂದ ಹೊರಡಲಿದ್ದು, ಚಿಕಿತ್ಸೆಗಾಗಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಪರಿಕರ್ ಅಮೆರಿಕದಿಂದ ಹಿಂದಿರುಗಿದ ನಂತರ ಅವರನ್ನು ಕ್ಯಾಂಡೋಲಿಮ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವರ್ಷದ ಆರಂಭದಲ್ಲಿ ಅವರು ಅಮೇರಿಕಾದಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.ಪರಿಕರ್ ಅವರು ಶುಕ್ರವಾರದಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾಗೆ ದೂರವಾಣಿ ಮೂಲಕ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋವಾ ಬಿಜೆಪಿ ತನ್ನ ರಾಜ್ಯ ಮಟ್ಟದ ಕೋರ್ ಸಮಿತಿಯ ಸಭೆಯನ್ನು ಶುಕ್ರವಾರ ನಡೆಸಿ ಅನಂತರ ಕೋರ್ ಕಮಿಟಿ ಸದಸ್ಯರು ಪರಿಕ್ಕರ್ ಅವರನ್ನು ಭೇಟಿಯಾದರು ಎಂದು ತಿಳಿದುಬಂದಿದೆ.