ಆಸ್ತಿ ವಿವಾದ: ಪೊಲೀಸ್ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ವ್ಯಕ್ತಿ ಯತ್ನ!

ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

Last Updated : Jul 31, 2019, 01:14 PM IST
ಆಸ್ತಿ ವಿವಾದ: ಪೊಲೀಸ್ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ವ್ಯಕ್ತಿ ಯತ್ನ! title=
Pic Courtesy: ANI

ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸಿಂಗರಾಯಕೊಂಡ ಪಟ್ಟಣದ ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. 

ಮೂಲಗಳ ಪ್ರಕಾರ, ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಸಂತ್ರಸ್ತನನ್ನು ನಾಗರಾಜು ಎಂದು ಗುರುತಿಸಲಾಗಿದೆ. ನಾಗರಾಜು ಮತ್ತು ಅವರ ಚಿಕ್ಕಪ್ಪ ನಾಗೇಶ್ವರ ರಾವ್ ಅವರ ನಡುವೆ ಕೆಲವು ಕೌಟುಂಬಿಕ ವಿವಾದಗಳಿದ್ದು, ಇದರಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. 

ಈ ಸಂಬಂಧ ಮಂಗಳವಾರ ಸಂಜೆ ಪೊಲೀಸ್ ಠಾಣೆಗೆ ತೆರಳಿದ ನಾಗರಾಜು ಪೊಲೀಸರು ತನಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದಲ್ಲದೆ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮುರಳೀಧರ್ ಅವರು ಲಂಚ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಸಿಂಗಾರಾಯಕೊಂಡ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕೂಡಲೇ ಪೊಲೀಸರು ಅಲ್ಲೇ ಇದ್ದ ಕುಡಿಯುವ ನೀರಿನ ಕ್ಯಾನಿನ ನೀರನ್ನು ಸುರಿದು ಬೆಂಕಿ ನಂದಿಸಿ, ನಾಗರಾಜ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಗರಾಜು ಅವರ ದೇಹದಲ್ಲಿ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Trending News