ನವದೆಹಲಿ: ಹೌದು, ಈಗ ರಸ್ತೆ ಸುರಕ್ಷತೆಯತ್ತ ಹೆಜ್ಜೆ ಇಟ್ಟಿರುವ ಮಧ್ಯಪ್ರದೇಶ ಸರ್ಕಾರವು ದ್ವಿಚಕ್ರ ವಾಹನ ಖರೀದಿದಾರರು ತಮ್ಮ ವಾಹನವನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಎರಡು ಹೆಲ್ಮೆಟ್‌ಗಳನ್ನು ಖರೀದಿಸುವುದು ಕಡ್ಡಾಯ ಎನ್ನುವ ನೂತನ ನಿಯಮವನ್ನು ಜಾರಿಗೆ ತಂದಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಗುರುವಾರ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ನಿರ್ದೇಶನದಲ್ಲಿ ಈಗ ಸಾರಿಗೆ ಇಲಾಖೆಗೆ ಹೆಲ್ಮೆಟ್ಗಳ ಸ್ವೀಕೃತಿಯನ್ನು ತೋರಿಸಲು ಮಾಲೀಕರಿಗೆ ಆದೇಶ ನೀಡಲಾಗಿದೆ.
ಈ ನಿಯಮದ ಕುರಿತಾಗಿ ಪ್ರತಿಕ್ರಿಯಿಸಿರುವ ಸಾರಿಗೆ ಆಯುಕ್ತ ಶೈಲೇಂದ್ರ ಶ್ರೀವಾಸ್ತವ "ದ್ವಿಚಕ್ರ ವಾಹನ ಚಾಲಕರು ಮತ್ತು ಸಹಚರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭೋಪಾಲ್ ಸೇರಿದಂತೆ ರಾಜ್ಯದ ಹೊಸ ವಾಹನ ಖರೀದಿದಾರರಿಗೆ ಎರಡು ಹೆಲ್ಮೆಟ್ ನೀಡುವಂತೆ ನಾವು ಮಾರಾಟಗಾರರಿಗೆ ನಿರ್ದೇಶನ ನೀಡಿದ್ದೇವೆ. ಎರಡು ಹೆಲ್ಮೆಟ್‌ಗಳ ಖರೀದಿಯ ರಶೀದಿಯನ್ನು ಇರದ ಯಾವುದೇ ವಾಹನಕ್ಕೆ ನೋಂದಣಿ ಮಾಡದಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ" ಎಂದು ಹೇಳಿದರು.
"ಈ ನಿಟ್ಟಿನಲ್ಲಿ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಅದರ ನಂತರ, ಸೆಪ್ಟೆಂಬರ್ 5, 2014 ರಂದು ಆದೇಶದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಾರಿಗೆ ಇಲಾಖೆಯು ನಿರ್ದೇಶನ ನೀಡಿತ್ತು. ಇದನ್ನು ಪರೀಕ್ಷಿಸಿದರು ಕೂಡ ಆದೇಶಗಳನ್ನು ಪಾಲಿಸಲು ಸಾಧ್ಯವಾಗಿರಲಿಲ್ಲ " ಎಂದು ಶ್ರೀವಾಸ್ತವ ಹೇಳಿದರು.