ನವದೆಹಲಿ: ಶಾಸಕಿ ಹಾಗೂ ಜೈಪುರದ ರಾಜವ೦ಶಸ್ಥೆ ದಿಯಾ ಕುಮಾರಿ ಈಗ ಪತಿ ನರೇಂದ್ರ ಸಿಂಗ್ ಜೊತೆ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆ ಮೂಲಕ 21 ವರ್ಷಗಳ ವಿವಾಹ ಸಂಬಂಧವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಭಾನುವಾರದಂದು ಪರಸ್ಪರ ಜಂಟಿ ಹೇಳಿಕೆ ನೀಡಿದ ದಿಯಾ ಮತ್ತು ನರೇಂದ್ರ ಸಿಂಗ್ " ಇದು ನಮ್ಮ ವೈಯಕ್ತಿಕ ವಿಚಾರ, ಆದ್ದರಿಂದ ಈ ವಿಷಯದ ಕುರಿತು ನಾವು ಹೆಚ್ಚೇನು ಹೇಳಲಾರೆವು ನಾವು ಜಂಟಿಯಾಗಿ ಈ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಜೈಪುರ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ದಿಯಾಕುಮಾರಿ ಅರ್ಜಿ ಸಲ್ಲಿಸಿದ್ದರು.ಭವಾನಿ ಸಿಂಗ್ ಮತ್ತು ಪದ್ಮಣಿ ದೇವಿ ಅವರ ಏಕೈಕ ಪುತ್ರಿಯಾಗಿದ್ದ ಅವರು ಸಾಧಾರಣ ಕುಟುಂಬದ ಹಿನ್ನಲೆಯಿಂದ ಬಂದಂತಹ ನರೇಂದ್ರ ಸಿಂಗ್ ಅವರೊಂದಿಗೆ 1997 ರಲ್ಲಿ ಪ್ರೇಮ ವಿವಾಹ ಮಾಡಿಕೊಂಡಿದ್ದರು.2013 ರಲ್ಲಿ ರಾಜಕೀಯ ಪ್ರವೇಶಿಸಿದ್ದ ದಿಯಾಕುಮಾರಿ ಸವಾಯಿ ಮಾಧೋಪುರ್ ಕ್ಷೇತ್ರದಿಂದ 2013 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದರು.
ದಿಯಾಕುಮಾರಿ ಅವರು ನರೇಂದ್ರ ಸಿಂಗ್ ಅವರನ್ನು ಮದುವೆಯಾಗುವ ವೇಳೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಏಕೆಂದರೆ ಇಬ್ಬರು ಒಂದೇ ಗೋತ್ರದವರಾಗಿದ್ದರಿಂದ ರಜಪೂತ ಸಮುದಾಯ ಮತ್ತು ರಾಜಮನೆತನದವರು ವಿರೋಧ ವ್ಯಕ್ತಪಡಿಸಿದ್ದರು.