ನವದೆಹಲಿ: ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವಿಮಾ ಪಾಲಸಿ ಧಾರಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹೌದು ಇದೀಗ ವಿಮಾ ಪಾಲಸಿ ಹೊಂದಿದವರು ತಮ್ಮ ಮಾರ್ಚ್ ಪಾಲಿಸಿಯ ಪ್ರೀಮಿಯಂ ಅನ್ನು ಮೇ 31 ರವರೆಗೆ ಭರ್ತಿ ಮಾಡಲು ಇದರಿಂದ ಸಾಧ್ಯವಾಗಲಿದೆ. ಕರೋನಾ ವೈರಸ್‌ನಿಂದಾಗಿ, ಪ್ರಸ್ತುತ ಇಡೀ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಕಾರಣದಿಂದಾಗಿ ಐಆರ್‌ಡಿಎ ಈ ಕ್ರಮ ಕೈಗೊಂಡಿದೆ. ಈ ಮೊದಲು, ಮಾರ್ಚ್ 23 ಮತ್ತು ಏಪ್ರಿಲ್ 4 ರಂದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕಾದ ಪ್ರೀಮಿಯಂಗಳಿಗೆ 30 ದಿನಗಳ ಕಾಲಾವಕಾಶ ಐಆರ್ಡಿಎ ಘೋಷಿಸಿತ್ತು.
ಕರೋನಾ ವೈರಸ್ ಸಾಂಕ್ರಾಮಿಕ ತಡೆಗಟ್ಟುವಿಕೆಗಾಗಿ ನಡೆಸಲಾಗುತ್ತಿರುವ ಲಾಕ್ ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ವಿಮಾ ಪಾಲಿಸಿದಾರರಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರ್ಡಾ ಹೇಳಿದೆ. ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಇರುವ ಪ್ರಸ್ತುತ ಸ್ಥಿತಿ ಮತ್ತು ಈ ನಿಟ್ಟಿನಲ್ಲಿ ಸ್ವೀಕರಿಸಲಾಗಿರುವ ಮನವಿಗಳನ್ನು ಪರಿಶೀಲಿಸಿದ ಬಳಿಕ, ಮಾರ್ಚ್‌ನಲ್ಲಿ ಪ್ರಿಮಿಯಂ ಪಾವತಿಸಬೇಕಾಗಿರುವ ಎಲ್ಲ ವಿಮಾ ಪಾಲಸಿಗಳನ್ನು ಇದೀಗ 31 ಮೇ 2020ರವರೆಗೆ ನವೀಕರಿಸಬಹುದಾಗಿದೆ.
ಇದರ ಜೊತೆಗೆ ಪ್ರೀಮಿಯಂ ಪಾವತಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲು ವ್ಯವಸ್ಥೆ ಮಾಡುವಂತೆ ವಿಮಾ ನಿಯಂತ್ರಕ ಐಆರ್‌ಡಿಎ ಎಲ್ಲಾ ಜೀವ ವಿಮಾ ಕಂಪನಿಗಳಿಗೆ ಸೂಚಿಸಿದೆ. ಅಂದರೆ, ನೀವು ನಿಮ್ಮ ಪಾಲಸಿಯ ಪ್ರೀಮಿಯಂ ಅನ್ನು ಮನೆಯಿಂದಲೇ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ.ಪಾಲಿಸಿ ವ್ಯಾಪ್ತಿಯನ್ನು ಕಾಪಾಡಲು ಎಲ್ಲ ಪ್ರಿಮಿಯಂ ಪಾವತಿದಾರರು ನೀಡಲಾಗಿರುವ ಈ ವಿನಾಯಿತಿ ಅವಧಿಯಲ್ಲಿ ತಮ್ಮ ಪ್ರೀಮಿಯಂಗಳನ್ನು ಪಾವತಿಸುವಂತೆ ವಿಮಾ ನಿಯಂತ್ರಕ ಪ್ರಾಧಿಕಾರ ಮನವಿ ಮಾಡಿದೆ.