ಗುಂಟೂರು: ಆಂದ್ರಪ್ರದೇಶವು ಮತ್ತೆ ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ, ಆದರೆ ಈ ಬಾರಿ ಇದನ್ನು ವ್ಯಕ್ತಡಿಸಿದವರು ಬೇರೆ ಯಾರು ಅಲ್ಲ ಸ್ವತಃ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.
ಹೌದು, ಇತ್ತೀಚಿಗೆ ಮಂಡಿಸಿದ್ದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ತಮಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ ಎಂದು ನೀರಿಕ್ಷಿಸಿದ್ದ ಆಂದ್ರಪ್ರದೇಶಕ್ಕೆ ತೀವ್ರ ಅಸಮಾಧಾನವಾಗಿದೆ. ಈ ಕುರಿತಾಗಿ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು "ನಾನು 29 ಸಾರಿ ದೆಹಲಿಗೆ ತೆರಳಿ ಅಲ್ಲಿ ಹಲವರನ್ನು ನಾನು ಭೇಟಿಯಾಗಿದ್ದೇನೆ,ಆದರೆ ಇನ್ನು ಕೂಡಾ ನಮಗೆ ನ್ಯಾಯ ದೊರೆತಿಲ್ಲ, ಬಜೆಟ್ ನಲ್ಲಿಯೂ ಕೂಡಾ ಇದು ಹುಸಿಯಾಗಿದೆ" ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯ ಕುರಿತು ಮಾತನಾಡಿದ ಅವರು "ರಾಜ್ಯದ ಅಭಿವೃದ್ದಿಗೆ ಮೈತ್ರಿ ಪೂರಕವಾಗಿರುತ್ತದೆ ಎನ್ನುವ ಒಂದೇ ಕಾರಣಕ್ಕಾಗಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳಲಾಯಿತು. ಆ ಮೂಲಕವಾದರೂ ಆಂದ್ರದ ಜನಕ್ಕೆ ನ್ಯಾಯ ಸಿಗುತ್ತೆ ಎನ್ನುವ ವಿಶ್ವಾಸ ತಮ್ಮದಾಗಿತ್ತು" ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಆಂದ್ರ ಪ್ರದೇಶಕ್ಕೆ ವಿಶೇಷ ಅನುದಾನ ನೀಡದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷವು ಬಿಜೆಪಿ ಜೊತೆಗಿನ ಮೈತ್ರಿಯನ್ನು ಪರಿಶೀಲಿಸುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಹೇಳಲಾಗುತ್ತಿದೆ.