ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಯೋಜನೆಯ ಮಾರ್ಗಸೂಚಿಯನ್ನೇ ಪೂರ್ಣ ಪ್ರಮಾಣದ ಬಜೆಟ್ ಎಂದು ಕರೆಯಲಾಗುತ್ತದೆ. ಯಾವ ಮೂಲದಿಂದ ಆದಾಯ ಬರುತ್ತದೆ? ಅದನ್ನು ಯಾವ ಕ್ಷೇತ್ರಕ್ಕೆ ವಿನಿಯೋಗ ಮಾಡಬೇಕು? ಎಂಬುದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲದೇ ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ. ಅವಧಿ ಪೂರೈಸುವ ಮುನ್ನ ಯಾವುದೇ ಸರ್ಕಾರವಾಗಿರಲಿ ಮುಂದಿನ ನಾಲ್ಕು ತಿಂಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಅದರಲ್ಲಿ ಯಾವುದೇ ಹೊಸ ತೆರಿಗೆ ಮತ್ತು ಹೊಸ ಘೋಷಣೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ. ವೇತನ ಪಾವತಿ ಸೇರಿದಂತೆ ಯಾವುದೇ ಯೋಜನೆಗಳಿಗೆ ನೀಡಲಾಗುವ ವೆಚ್ಚದ ಪ್ರಮಾಣ ಮುಂದುವರಿಸಲು ಸಂಸತ್ ಅನುಮತಿ ಅಗತ್ಯವಾಗಿರುತ್ತದೆ. ಇದುವೇ ಕೇಂದ್ರದ ಮಧ್ಯಂತರ ಬಜೆಟ್ ಆಗಿರುತ್ತದೆ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಬಿಜೆಪಿ, ಈಗ ಈ ಬಜೆಟ್ ನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರನ್ನು ಕೇಂದ್ರಿಕೃತವಾಗಿಟ್ಟುಕೊಂಡು ತೆರಿಗೆ ಕಡಿತ ಹಾಗೂ ಕೃಷಿ ಪರಿಹಾರದಂತಹ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಧ್ಯಂತರ ಬಜೆಟ್ ನಲ್ಲಿ ಹೆಚ್ಚಿನ ಆಧ್ಯತೆ ನೀಡಬಹುದಾದ ಕೆಲವು ಪ್ರಮುಖ ವಲಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
-ಕೃಷಿ ಪರಿಹಾರ ಪ್ಯಾಕೇಜ್ ಕನಿಷ್ಠ 1 ಟ್ರಿಲಿಯನ್ ರೂಪಾಯಿ ($ 14.04 ಬಿಲಿಯನ್)
-ಹಣಕಾಸಿನ ವರ್ಷದಲ್ಲಿ ಆಹಾರ ಸಬ್ಸಿಡಿಗಳಿಗೆ 1.8 ಟ್ರಿಲಿಯನ್ ರೂ ಮೀಸಲು
-ಆಹಾರ ಬೆಳೆಗಳಿಗೆ ವಿಮೆ ಪಾಲಿಸಿ
-ಹಣಕಾಸು ವರ್ಷ 2019-20 ರಲ್ಲಿ ರಾಜ್ಯದ ಆಸ್ತಿ ಮಾರಾಟದ ಗುರಿ $ 11 ಬಿಲಿಯನ್ ತಲುಪುವುದು.
-ಚಿನ್ನದ ಮೇಲಿನ ತೆರಿಗೆ ಕಡಿತಗೊಳಿಸುವುದು
-ಆರೋಗ್ಯಕ್ಕಾಗಿ ಶೇ 5 ರಷ್ಟು ಬಜೆಟ್ ಹಂಚಿಕೆಯನ್ನು ಏರಿಕೆ ಮಾಡುವುದು
-ಕಾರ್ಪೋರೆಟ್ ತೆರಿಗೆ ದರವು ಶೇ 30 ರಿಂದ ಶೇ 25ಕ್ಕೆ ಕಡಿತಗೊಳಿಸಬಹುದು
-ಮಧ್ಯಮ ವರ್ಗ ಮತ್ತು ನಿರೀಕ್ಷಿತ ಸಣ್ಣ ಉದ್ಯಮಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ
-50 ದಶಲಕ್ಷಕ್ಕಿಂತ ಕಡಿಮೆ ವಾರ್ಷಿಕ ಮಾರಾಟವನ್ನು ಹೊಂದಿರುವ ವ್ಯವಹಾರಗಳಿಗೆ ಸಾಲಗಳ ಮೇಲೆ ಶೇ. 2 ರಷ್ಟು ರಿಯಾಯಿತಿ
-ಸಾರ್ವಜನಿಕ ವಲಯದ ಸಾಮಾನ್ಯ ವಿಮಾದಾರರಿಗೆ 40 ಬಿಲಿಯನ್ ರೂಪಾಯಿ ಬಂಡವಾಳ ಹೂಡಿಕೆ
-ವಿದ್ಯುತ್ ವಾಹನಗಳು ಮತ್ತು ಬ್ಯಾಟರಿಗಳ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಕಡಿತಗೊಳಿಸುವುದು
-ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಡಿಜಿಟಲ್ ಮೂಲಸೌಕರ್ಯ, ನವೋಧ್ಯಮಗಳನ್ನು ಹೆಚ್ಚಿಸಲು ಏಂಜಲ್ ತೆರಿಗೆ ನಿರ್ಮೂಲನೆ