ನವದೆಹಲಿ: ದೇಶದಲ್ಲಿ ಹೆಚ್ಚು ಚರ್ಚೆಗೆ ಒಳಪಡುವ ಪರೀಕ್ಷೆಗಳಲ್ಲಿ ಒಂದಾದ JEE, NEET ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಮುಖ ಘೋಷಣೆ ಮಾಡಿದೆ. ರಮೇಶ್ ಪೋಖರಿಯಲ್ ನಿಶಾಂಕ್ ನೇತೃತ್ವದ ಸಚಿವಾಲಯವು JEE ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸಲು ನಿರ್ಧರಿಸಿದೆ.
ಜಂಟಿ ಪ್ರವೇಶ ಪರೀಕ್ಷೆ (JEE-Mains) ಫೆಬ್ರವರಿ 2021 ರಿಂದ ನಾಲ್ಕು ಬಾರಿ ನಡೆಯಲಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬೋರ್ಡ್ ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತ ನಡೆಸಿದ ಆನ್‌ಲೈನ್ ಸಂವಾದದಲ್ಲಿ ಈ ಘೋಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಜೆಇಇ-ಮೇನ್ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.
ವರದಿಗಳ ಪ್ರಕಾರ ಅಭ್ಯರ್ಥಿಗಳಿಗೆ ಸಾಕಷ್ಟು ನಮ್ಯತೆಯನ್ನು ಒದಗಿಸುವ ಸಲುವಾಗಿ ಈ ವರ್ಷ ಫೆಬ್ರವರಿಯಿಂದ ಮೇ 2021 ರವರೆಗೆ ಪರೀಕ್ಷೆಯನ್ನು ನಡೆಸಲಾಗುವುದು. ಅಭ್ಯರ್ಥಿಗಳು ಒಂದು ಅಥವಾ ಎಲ್ಲಾ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಆಯ್ಕೆ ನೀಡಲಾಗಿದೆ ಮತ್ತು ಅಭ್ಯರ್ಥಿ ಅಧಿಕ ಅಂಕ ಗಳಿಸಿರುವುದನ್ನು ಪ್ರವೇಶಕ್ಕಾಗಿ ಪರಿಗಣಿಸಲಾಗುತ್ತದೆ. ಪರೀಕ್ಷೆಯ ಪಠ್ಯಕ್ರಮವು ಬದಲಾಗದೆ ಇದ್ದರೂ, ಅಂದರೆ ಪಠ್ಯಕ್ರಮ ಕಡಿತದ ಪರಿಣಾಮವನ್ನು ನಿವಾರಿಸಲು ಒಟ್ಟು 90 ಪ್ರಶ್ನೆಗಳಲ್ಲಿ 75 ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡುವ ಪ್ರಸ್ತಾಪವು ಪರಿಗಣನೆಯಲ್ಲಿದೆ ಎಂದು ಅವರು ಹೇಳಿದರು. ಜೆಇಇ 2020 (ಮುಖ್ಯ) ಪರೀಕ್ಷೆ ಅವಧಿಯಲ್ಲಿ ಅಭ್ಯರ್ಥಿಗಳು 75 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು - ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ತಲಾ 25 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್
JEE-ಮೇನ್ಸ್‌ನಲ್ಲಿನ ಸ್ಕೋರ್ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ), ಇತರ ಹಲವಾರು ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಪ್ರವೇಶಿಸಲು ಮತ್ತು ಜೆಇಇ-ಅಡ್ವಾನ್ಸ್ಡ್ ಬರೆಯಲು ಅರ್ಹತೆಗಾಗಿ ಪರಿಗಣಿಸಲಾಗುತ್ತದೆ. ದೇಶಾದ್ಯಂತದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಲ್ಲಿ ಸ್ಥಾನ ಪಡೆಯಲು ಬಯಸುವ ಅಭ್ಯರ್ಥಿಗಳು ಜೆಇಇ-ಅಡ್ವಾನ್ಸ್ಡ್ ಅನ್ನು ಕ್ಲಿಯರ್ ಮಾಡುವುದು ಮುಖ್ಯವಾಗಿದೆ.
NEET ಮತ್ತು JEE ಪರೀಕ್ಷೆ 2021ಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು:
1. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು 2021 ರ ಪರೀಕ್ಷಾ ದಿನಾಂಕಗಳನ್ನು ಮೊದಲೇ ಪ್ರಕಟಿಸಲಾಗುವುದು ಎಂದು ಪೋಖ್ರಿಯಲ್ ಭರವಸೆ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತಯಾರಿಗಾಗಿ ಸಾಕಷ್ಟು ಸಮಯ ಸಿಗುತ್ತದೆ.
2. 2021ರ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪಠ್ಯಕ್ರಮ ಕಡಿತದ ಕುರಿತು, ಸಿಬಿಎಸ್‌ಇ ಈಗಾಗಲೇ 10 ಮತ್ತು 12 ನೇ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿತಗೊಳಿಸಿದೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ.
3. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ 2021 ರ ಪರಿಷ್ಕೃತ ಪಠ್ಯಕ್ರಮವನ್ನು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ - cbse.nic.in.
4. ಸಿಬಿಎಸ್‌ಇ (CBSE) ಮಂಡಳಿ ಕಡಿಮೆಗೊಳಿಸಿದ ಪಠ್ಯಕ್ರಮಕ್ಕೆ ಅನುಗುಣವಾಗಿ ಜೆಇಇ, ನೀಟ್ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
CBSE ಬೋರ್ಡ್ ಪರೀಕ್ಷೆಯ ಪಠ್ಯ ಕಡಿಮೆಯಾಗುವ ನಿರೀಕ್ಷೆ, ಪರೀಕ್ಷೆಗಳು ಯಾವಾಗ ಇಲ್ಲಿದೆ ಮಾಹಿತಿ
5. ಪರೀಕ್ಷೆಯ ಪರ್ಯಾಯ ವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಪೋಖ್ರಿಯಾಲ್, "ನಾವು ಇಲ್ಲಿಯವರೆಗೆ ಆಫ್‌ಲೈನ್ ಮೋಡ್‌ನಲ್ಲಿ ನೀಟ್ ನಡೆಸಿದ್ದೇವೆ ... ಆದರೆ ವಿದ್ಯಾರ್ಥಿಗಳು ಆನ್‌ಲೈನ್ ನೀಟ್ ಪರೀಕ್ಷೆಯನ್ನು ಬಯಸಿದರೆ ನಾವು ಅದನ್ನು ಪರಿಗಣಿಸುತ್ತೇವೆ" ಎಂದು ಹೇಳಿದರು.
6. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ - ಜೆಇಇ ಮುಖ್ಯ - ಪ್ರತಿವರ್ಷ ಅನೇಕ ಅಧಿವೇಶನಗಳಲ್ಲಿ ನಡೆಯಬಹುದೇ ಎಂದು ತಮ್ಮ ಸಚಿವಾಲಯ ಪರಿಗಣಿಸುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದರು. ಪ್ರಸ್ತುತ ಇದನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.
7. ಸ್ಪರ್ಧಾತ್ಮಕ ಪರೀಕ್ಷೆಗಳು ರದ್ದಾಗುವ ಸಾಧ್ಯತೆಯನ್ನು ಪೋಖ್ರಿಯಾಲ್ ತಳ್ಳಿಹಾಕಿದರು. ಅಲ್ಲದೆ ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದಿಂದ ಉಂಟಾಗುವ ತೊಂದರೆಗಳ ನಡುವೆಯೂ ಈ ವರ್ಷ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಹೇಳಿದರು.
8. ಸಿಬಿಎಸ್‌ಇ ಪ್ರಾಯೋಗಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೆಲಸಗಳಿಗಾಗಿ ಶಾಲೆಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಆ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಚರ್ಚಿಸುತ್ತೇವೆ ಎಂದು ಅವರು ಹೇಳಿದರು.