ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, 25 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಕನಿಷ್ಠ 14 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸುಮಾರು 62 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.
ಅಸ್ಸಾಂ ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದಲ್ಲಿ 2200 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.
ಅಸ್ಸಾಂ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣ ಮಾತನಾಡಿ, “ರಾಜ್ಯದಲ್ಲಿ ಪ್ರವಾಹದ ಆಗಮನದಿಂದ ಇಪ್ಪತ್ತೈದು ಜಿಲ್ಲೆಗಳ, 2217 ಗ್ರಾಮಗಳಲ್ಲಿ ಸುಮಾರು 14,06,711 ಜನರು ಬಾಧಿತರಾಗಿದ್ದಾರೆ. ಪರಿಹಾರ ಮತ್ತು ರಕ್ಷಣಾ ಉದ್ದೇಶಕ್ಕಾಗಿ ಸುಮಾರು 62 ಪರಿಹಾರ ಶಿಬಿರಗಳು ಮತ್ತು 172 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.
ಮೊರಿಗಾಂವ್ ಜಿಲ್ಲೆಯಲ್ಲಿ, ಬ್ರಹ್ಮಪುತ್ರ ನದಿಯ ನೀರು ಈ ಪ್ರದೇಶವನ್ನು ಪ್ರವೇಶಿಸಿದ ನಂತರ 180 ಕ್ಕೂ ಹೆಚ್ಚು ಗ್ರಾಮಗಳು ದುರಂತ ಪ್ರವಾಹಕ್ಕೆ ಸಿಲುಕಿದ್ದು ಈ ಭಾಗದಲ್ಲಿ ಕನಿಷ್ಠ 94,000 ಜನರು ಬಾಧಿತರಾಗಿದ್ದಾರೆ.
"ಬ್ರಹ್ಮಪುತ್ರ ನದಿಯಿಂದ ನೀರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಹರಿಯುವುದರಿಂದ ಅನೇಕ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ" ಎಂದು ಮೊರಿಗಾಂವ್ನ ಭೂರಾಗಾಂವ್ನ ಸ್ಥಳೀಯರು ತಿಳಿಸಿದ್ದಾರೆ. "ನಮ್ಮ ಮನೆಗಳ ಸುತ್ತಲೂ ನೀರು ನಿರಂತರವಾಗಿ ತುಂಬುತ್ತಿದೆ ಮತ್ತು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಆದರೂ ಯಾವುದೇ ಸರ್ಕಾರಿ ಅಧಿಕಾರಿಗಳು ನಮಗೆ ರಕ್ಷಣೆ ನೀಡಲು ಮುಂದಾಗಿಲ್ಲ" ಎಂದು ಅವರು ದೂರಿದ್ದಾರೆ.
ನೈರ್ಮಲ್ಯವಿಲ್ಲದ ಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು ನಿವಾಸಿಗಳ, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಅದಾಗ್ಯೂ, ಸರ್ಕಾರದಿಂದ ಯಾವುದೇ ರಕ್ಷಣಾ ಕಾರ್ಯ ಕೈಗೊಂಡಿಲ್ಲ ಎನ್ನಲಾಗಿದೆ.
ಆದರೆ, ದಲ್ಗಾಂವ್ ಕಂದಾಯ ಅಧಿಕಾರಿ ಯುವರಾಜ್ ಬರ್ತಕೂರ್ ಅವರ ಪ್ರಕಾರ, ಆಡಳಿತವು ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದು ಸೂಕ್ತ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
"ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಗಿದೆ. ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಮತ್ತು ಪರಿಹಾರ ಶಿಬಿರಗಳಿಗೆ ಬರಲು ಸಾಧ್ಯವಾಗದ ಜನರಿಗೆ ಆಹಾರವನ್ನು ಒದಗಿಸಲಾಗುತ್ತಿದೆ" ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದರು.
ವಿವಿಧ ಜಿಲ್ಲೆಗಳಿಗೆ ಪರಿಹಾರ ಉದ್ದೇಶಕ್ಕಾಗಿ ಸುಮಾರು 56 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.