ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಜನ್ಮದಿನ: ಶತ್ರುಗಳೂ ಸೆಲ್ಯೂಟ್ ಹೊಡೆದ ಭಾರತೀಯ ವೀರ ಯೋಧನ ಸ್ಮರಣೆ

ಜನರಲ್ ಕಾರ್ಯಪ್ಪನವರನ್ನು ಇಂದಿಗೂ ಅವರ ದೇಶಭಕ್ತಿ ಮತ್ತು ಹುಮ್ಮಸ್ಸಿಗಾಗಿ ಸ್ಮರಿಸಲಾಗುತ್ತದೆ. 1922ರಲ್ಲಿ ಶಾಶ್ವತ ಸೇನಾ ನೇಮಕಾತಿ ಗಳಿಸಿದ ಬಳಿಕ ಅವರು ಲೆಫ್ಟಿನೆಂಟ್ ಪದವಿ ಗಳಿಸಿದರು. ಕಾಲಕ್ರಮೇಣ ಅವರು ಫೀಲ್ಡ್ ಮಾರ್ಷಲ್ ಎಂಬ ಶಾಶ್ವತ ಫೈವ್ ಸ್ಟಾರ್ ಹುದ್ದೆಗೆ ಭಾಜನರಾದರು.

Written by - Girish Linganna | Last Updated : Jan 28, 2023, 04:31 PM IST
    • ಭಾರತೀಯ ಸೇನೆ ಜಗತ್ತಿನಲ್ಲೇ ಅತ್ಯಂತ ಶಿಸ್ತುಬದ್ಧ, ಭಯರಹಿತವಾದ ಸೇನೆ ಎಂದೇ ಪ್ರಸಿದ್ಧವಾಗಿದೆ
    • ಭಾರತೀಯ ಸೇನೆಯ ಜನರಲ್‌ಗಳಾಗಿ ಅಧಿಕಾರ ವಹಿಸಿಕೊಂಡ ಸೇನಾಧಿಕಾರಿಗಳ ಪಾತ್ರವೂ ಪ್ರಮುಖವಾಗಿದೆ
    • ಜನರಲ್ ಕಾರ್ಯಪ್ಪನವರನ್ನು ಇಂದಿಗೂ ಅವರ ದೇಶಭಕ್ತಿ ಮತ್ತು ಹುಮ್ಮಸ್ಸಿಗಾಗಿ ಸ್ಮರಿಸಲಾಗುತ್ತದೆ
ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಜನ್ಮದಿನ: ಶತ್ರುಗಳೂ ಸೆಲ್ಯೂಟ್ ಹೊಡೆದ ಭಾರತೀಯ ವೀರ ಯೋಧನ ಸ್ಮರಣೆ title=
Field Marshal KM Cariappa

ಭಾರತೀಯ ಸೇನೆ ಜಗತ್ತಿನಲ್ಲೇ ಅತ್ಯಂತ ಶಿಸ್ತುಬದ್ಧ, ಭಯರಹಿತವಾದ ಸೇನೆ ಎಂದೇ ಪ್ರಸಿದ್ಧವಾಗಿದೆ. ಇದರ ಹಿಂದೆ ಭಾರತೀಯ ಸೇನೆಯ ಜನರಲ್‌ಗಳಾಗಿ ಅಧಿಕಾರ ವಹಿಸಿಕೊಂಡ ಸೇನಾಧಿಕಾರಿಗಳ ಪಾತ್ರವೂ ಪ್ರಮುಖವಾಗಿದೆ. ಈ ಜನರಲ್‌ಗಳಲ್ಲಿ ಜನರಲ್ ಕೊಡಂದೇರ ಮಾದಪ್ಪ ಕಾರ್ಯಪ್ಪನವರ ಹೆಸರೂ ಅತ್ಯಂತ ಪ್ರಮುಖವಾದದ್ದು, ಪ್ರಸಿದ್ಧವಾದದ್ದು.

ಜನರಲ್ ಕಾರ್ಯಪ್ಪನವರನ್ನು ಇಂದಿಗೂ ಅವರ ದೇಶಭಕ್ತಿ ಮತ್ತು ಹುಮ್ಮಸ್ಸಿಗಾಗಿ ಸ್ಮರಿಸಲಾಗುತ್ತದೆ. 1922ರಲ್ಲಿ ಶಾಶ್ವತ ಸೇನಾ ನೇಮಕಾತಿ ಗಳಿಸಿದ ಬಳಿಕ ಅವರು ಲೆಫ್ಟಿನೆಂಟ್ ಪದವಿ ಗಳಿಸಿದರು. ಕಾಲಕ್ರಮೇಣ ಅವರು ಫೀಲ್ಡ್ ಮಾರ್ಷಲ್ ಎಂಬ ಶಾಶ್ವತ ಫೈವ್ ಸ್ಟಾರ್ ಹುದ್ದೆಗೆ ಭಾಜನರಾದರು.

ಇದನ್ನೂ ಓದಿ: JNU-Jamia ಬಳಿಕ Delhi Universityಯಲ್ಲೂ ಗಲಭೆ; 144 ಸೆಕ್ಷನ್ ಜಾರಿ: 24 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ!

ಕರ್ನಾಟಕದ ಕೊಡಗಿನ ಶನಿವಾರಸಂತೆಯಲ್ಲಿ ಜನವರಿ 28, 1899ರಂದು ಜನಿಸಿದ ಕಾರ್ಯಪ್ಪನವರು ಕೇವಲ ಇಪ್ಪತ್ತು ವರ್ಷ ವಯಸ್ಸಾಗಿದ್ದಾಗ ಸೇನೆಗೆ ಸೇರ್ಪಡೆಯಾದರು. ಅವರಿಗೆ ಸಂಬಂಧಿಸಿದ ಹಲವು ಉಪಾಖ್ಯಾನಗಳು ಅವರ ಶ್ರೇಷ್ಠ ವ್ಯಕ್ತಿತ್ವದೆಡೆಗೆ ಬೆಳಕು ಚೆಲ್ಲುತ್ತವೆ.

ಕಮಾಂಡರ್ ಇನ್ ಚೀಫ್ ಆಗಿ ನೇಮಕ:

1946ರಲ್ಲಿ, ಭಾರತದ ಆಗಿನ ಮಧ್ಯಂತರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಲದೇವ್ ಸಿಂಗ್ ಅವರು ಬ್ರಿಗೇಡಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾತು ಸಿಂಗ್ ಅವರನ್ನು ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಳಿಸುವುದಾಗಿ ಹೇಳಿದ್ದರು. ಆದರೆ ನಾತು ಸಿಂಗ್ ಅವರು ಸೇನೆಯಲ್ಲಿ ತನಗಿಂತ ಹಿರಿಯರಾಗಿದ್ದ ಕಾರ್ಯಪ್ಪನವರೇ ಆ ಹುದ್ದೆಗೆ ಅರ್ಹರೆಂದು ಕಮಾಂಡರ್ ಇನ್ ಚೀಫ್ ಪದವಿಯನ್ನು ತಿರಸ್ಕರಿಸಿದರು. ನಾತು ಸಿಂಗ್ ಅವರ ಬಳಿಕ ರಾಜೇಂದ್ರ ಸಿಂಗ್ ಅವರಿಗೆ ಈ ಹುದ್ದೆಯನ್ನು ನೀಡಲು ಉದ್ದೇಶಿಸಲಾಯಿತು. ಆದರೆ ಕಾರ್ಯಪ್ಪನವರ ಮೇಲಿನ ಗೌರವದಿಂದ ರಾಜೇಂದ್ರ ಸಿಂಗ್ ಅವರೂ ಪದವಿಯನ್ನು ತಿರಸ್ಕರಿಸಿದರು. ಡಿಸೆಂಬರ್ 4, 1948ರಂದು ಕಾರ್ಯಪ್ಪನವರನ್ನು ಭಾರತೀಯ ಸೇನೆಯ ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ನೇಮಿಸಲಾಯಿತು.

ಲೇಹ್ ಅನ್ನು ಭಾರತದ ಭಾಗವಾಗಿಸುವಲ್ಲಿ ಕಾರ್ಯಪ್ಪನವರ ಪಾತ್ರ:

ನವೆಂಬರ್ 1947ರಲ್ಲಿ ಕಾರ್ಯಪ್ಪನವರನ್ನು ಭಾರತೀಯ ಸೇನೆಯ ಪೂರ್ವ ಕಮಾಂಡ್ ಜವಬ್ದಾರಿ ನೀಡಿ ರಾಂಚಿಗೆ ನಿಯೋಜಿಸಲಾಗಿತ್ತು. ಆದರೆ ಅದಾಗಿ ಕೇವಲ ಎರಡು ತಿಂಗಳೊಳಗಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿತು. ಲೆಫ್ಟಿನೆಂಟ್ ಜನರಲ್ ಡುಡ್ಲೀ ರಸೆಲ್ ಅವರ ಬದಲಾಗಿ ಕಾರ್ಯಪ್ಪನವರನ್ನು ಡೆಲ್ಲಿ ಮತ್ತು ಪೂರ್ವ ಪಂಜಾಬ್‌ನ ಜಿಒಸಿ ಇನ್ ಚೀಫ್ ಆಗಿ ನೇಮಕಗೊಳಿಸಲಾಯಿತು. ಅವರ ನಾಯಕತ್ವದಡಿ ಭಾರತೀಯ ಸೇನೆ ನೌಶೇರಾ ಮತ್ತು ಝಾಂಗರ್ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಬಳಿಕ ಶತ್ರುಗಳನ್ನು ಜ಼ೊಜಿಲಾ, ದ್ರಾಸ್ ಮತ್ತು ಕಾರ್ಗಿಲ್‌ನಿಂದ ಹೊರಗಟ್ಟಲಾಯಿತು.

ಮಗನನ್ನು ಪೂರ್ಣ ಗೌರವದೊಡನೆ ಮರಳಿಸಿದ ಪಾಕಿಸ್ತಾನ:

1965ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಜನರಲ್ ಕಾರ್ಯಪ್ಪನವರ ಮಗ ನಂದಾ ಕಾರ್ಯಪ್ಪನವರು ವಾಯುಪಡೆಯಲ್ಲಿದ್ದರು. ಅವರು ಪಾಕಿಸ್ತಾನದ ಮೇಲಿನ ಗುರಿಗಳಿಗೆ ಬಾಂಬ್ ದಾಳಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ವಿಮಾನ ದಾಳಿಗೊಳಗಾಯಿತು. ಪಾಕಿಸ್ತಾನ ನಂದಾ ಅವರನ್ನು ಯುದ್ಧಖೈದಿಯಾಗಿ ವಶಕ್ಕೆ ತೆಗೆದುಕೊಂಡಿತು. ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಜನರಲ್ ಕಾರ್ಯಪ್ಪನವರ ನೇತೃತ್ವದ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂದಾ ಕಾರ್ಯಪ್ಪನವರು ಯಾರೆಂದು ತಿಳಿಯುತ್ತಿದ್ದಂತೆ ರೇಡಿಯೋ ಪಾಕಿಸ್ತಾನ ಫ್ಲೈಟ್ ಲೆಫ್ಟಿನೆಂಟ್ ನಂದಾ ಕಾರ್ಯಪ್ಪನವರು ತನ್ನ ವಶದಲ್ಲಿರುವುದಾಗಿಯೂ, ಸುರಕ್ಷಿತವಾಗಿರುವುದಾಗಿಯೂ ಘೋಷಿಸಿತು.

ಭಾರತದಲ್ಲಿದ್ದ ಪಾಕಿಸ್ತಾನದ ರಾಯಭಾರಿಯ ಮೂಲಕ ಅಯೂಬ್ ಖಾನ್ ಅವರು ಜನರಲ್ ಕಾರ್ಯಪ್ಪನವರಿಗೆ ಅವರ ಮಗನನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದರು. ಆದರೆ ಕಾರ್ಯಪ್ಪನವರು ಅದನ್ನು ತಿರಸ್ಕರಿಸಿದರು. ನಂದಾ ನನ್ನ ಮಗನಲ್ಲ, ದೇಶದ ಮಗ ಎಂದು ಹೇಳಿದರು. ಭಾರತೀಯ ಯುದ್ಧ ಖೈದಿಗಳನ್ನು ಪಾಕಿಸ್ತಾನ ಹೇಗೆ ನೋಡಿಕೊಳ್ಳುತ್ತದೆಯೋ, ನನ್ನ ಮಗನನ್ನೂ ಹಾಗೆಯೇ ನೋಡಿಕೊಳ್ಳಬೇಕು. ನೀವೇನಾದರೂ ನಂದಾನನ್ನು ಬಿಡುಗಡೆಗೊಳಿಸುವುದಾದರೆ, ಎಲ್ಲ ಭಾರತೀಯ ಯುದ್ಧ ಖೈದಿಗಳನ್ನೂ ಬಿಡುಗಡೆಗೊಳಿಸಿ ಎಂದರು.

ಶತ್ರುಗಳೂ ಗೌರವ ಕೊಡುತ್ತಿದ್ದ ಕಾರ್ಯಪ್ಪನವರು:

ಭಾರತ ಪಾಕಿಸ್ತಾನ ಯುದ್ಧ ಕೊನೆಗೊಂಡ ಬಳಿಕ, ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವ ಸಲುವಾಗಿ ಕಾರ್ಯಪ್ಪನವರು ಗಡಿ ಪ್ರದೇಶಗಳಿಗೆ ಭೇಟಿ ನೀಡಿದರು. ಅವರು ಗಡಿ ದಾಟಿ, 'ನೋ ಮ್ಯಾನ್ಸ್ ಲ್ಯಾಂಡ್' ಪ್ರವೇಶಿಸಿದರು. ಈ ಕುರಿತು ನಂದಾ ಕಾರ್ಯಪ್ಪನವರು ತಾನು ಬರೆದ ಕೆಎಂ ಕಾರ್ಯಪ್ಪನವರ ಜೀವನಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

"ಕಾರ್ಯಪ್ಪನವರನ್ನು ನೋಡುತ್ತಿದ್ದ ಹಾಗೇ, ಪಾಕಿಸ್ತಾನಿ ಕಮಾಂಡರ್ ಅವರನ್ನು ಅಲ್ಲಿಯೇ ನಿಲ್ಲುವಂತೆ ಆದೇಶಿಸಿದರು. ಇಲ್ಲವಾದರೆ ಅವರ ಮೇಲೆ ಗುಂಡು ಹಾರಿಸುವುದಾಗಿ ಹೇಳಿದರು. ಅಷ್ಟರಲ್ಲಿ ಭಾರತದ ಸೈನಿಕರು ಯಾರೋ ಜೋರಾಗಿ ಅವರು ಜನರಲ್ ಕೆಎಂ ಕಾರ್ಯಪ್ಪನವರು ಎಂದು ಕೂಗಿ ಹೇಳಿದರು. ಅವರ ಹೆಸರು ಕೇಳುತ್ತಿದ್ದ ಹಾಗೆಯೇ ಪಾಕಿಸ್ತಾನಿ ಸೈನಿಕರು ಆಯುಧ ಕೆಳಗಿಳಿಸಿದರು. ಪಾಕಿಸ್ತಾನದ ಅಧಿಕಾರಿಗಳು ಮುಂದೆ ಬಂದು, ಜನರಲ್ ಕಾರ್ಯಪ್ಪನವರಿಗೆ ಸೆಲ್ಯೂಟ್ ಹೊಡೆದು, ಗೌರವ ಸಲ್ಲಿಸಿದರು.

ಇದನ್ನೂ ಓದಿ:  ಮದ್ಯ ಮಾರಿ, ಅರೆಸ್ಟ್‌ ಆದ ಗಿಣಿರಾಮ.! ಈ ಐನಾತಿ ಗಿಳಿಯ ಕುಕೃತ್ಯ ತಿಳಿದ್ರೆ ಶಾಕ್‌ ಆಗ್ತೀರಾ

ಜನರಲ್ ಕಾರ್ಯಪ್ಪನವರು 1953ರಲ್ಲಿ ಸೇನೆಯಿಂದ ನಿವೃತ್ತರಾದರು. ಅವರ ನಿವೃತ್ತಿಯ ಬಳಿಕ 1956ರ ತನಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು. 1986ರಲ್ಲಿ ಅವರು ಭಾರತೀಯ ಸೇನೆ ಮತ್ತು ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಕಾರ್ಯಪ್ಪನವರಿಗೆ ಫೀಲ್ಡ್ ಮಾರ್ಷಲ್ ಶಾಶ್ವತ ಹುದ್ದೆ ನೀಡಿ ಗೌರವಿಸಿದರು. ಅದೇ ವರ್ಷ ಅವರಿಗೆ ಭಾರತದ ಎರಡನೆಯ ಅತ್ಯುನ್ನತ ಪುರಸ್ಕಾರವಾದ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News