ಕನ್ಯಾಕುಮಾರಿ: ಚಂಡಮಾರುತ ಓಕಿಯಿಂದ ತೊಂದರೆಗೊಳಗಾದ ಜಿಲ್ಲೆಯ 713 ಮೀನುಗಾರರನ್ನು ಇನ್ನೂ ರಕ್ಷಿಸಬೇಕಿದ್ದು, 60 ಬೋಟುಗಳು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಜ್ಜನ್ ಸಿಂಗ್ ಚವಾಣ್ ತಿಳಿಸಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಲಕ್ಷದ್ವೀಪ, ಕೇರಳ ಮತ್ತು ಗುಜರಾತ್ ನಲ್ಲಿ ವಾಸಿಸುತ್ತಿದ್ದ ರಾಜ್ಯದ 2,478 ಮೀನುಗಾರರನ್ನು ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಚಂಡಮಾರುತದಿಂದ ಸುಮಾರು 170 ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಮೇಲ್ವಿಚಾರಣಾ ಸಮಿತಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ನಾಳೆ ಸಿಗಲಿದೆ ಎಂದು ಚವಾಣ್ ತಿಳಿಸಿದ್ದಾರೆ.
ಚಂಡಮಾರುತದಿಂದ ಒಟ್ಟು 4,495 ಮನೆಗಳು ಹಾನಿಗೊಳಗಾಗಿದ್ದು, 93 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ. ಇನ್ನೂ 537 ಮನೆಗಳಿಗೆ ಪರಿಹಾರ ನೀಡಬೇಕಿದೆ.
ಕೇರಳದ ಕಾಸರಗೋಡುಗೆ, ಮಂಗಳೂರು ಮತ್ತು ಲಕ್ಷದ್ವೀಪಕ್ಕೆ ತೆರಳಿದ್ದ ಮೀನುಗಾರರಿಗೆ ಡೀಸೆಲ್ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, 1150 ಹಳ್ಳಿಗಳಲ್ಲಿ 642 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಲಾಗಿದೆ. ಹಾಗೆಯೇ ನೀರು ಸರಬರಾಜು ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.