ನವದೆಹಲಿ: ಮೇಘಾಲಯದಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಚಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಪಕ್ಷದ ಇಬ್ಬರು ಹಿರಿಯ ಮುಖಂಡರನ್ನು ಕಾಂಗ್ರೆಸ್ ಈಶಾನ್ಯ ರಾಜ್ಯಕ್ಕೆ ಕಳುಹಿಸಿದೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಅಹಮದ್ ಪಟೇಲ್ ಮತ್ತು ಕಮಲ್ ನಾಥ್ ಇಂದು ಬೆಳಗ್ಗೆ ಶಿಲ್ಲಾಂಗ್ಗೆ ತೆರಳಿದ್ದು, ಮೇಘಾಲಯದಲ್ಲಿ ಸರ್ಕಾರ ರಚಿಸಲು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಹೊಂದಾಣಿಕೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.
ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಈ ಬಾರಿಯ ಚುನಾವಣೆಯಲ್ಲೂ ಬಹುಮತ ಸಾಧಿಸಲಿದೆ ಎಂದು ಪ್ರಸ್ತುತ ಸ್ಥಿತಿಗತಿಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಯಕರು ಶಿಲ್ಲಾಂಗ್'ಗೆ ತೆರಳಿದ್ದಾರೆ. ಅಲ್ಲದೆ, ಇಂದು ಮಧ್ಯಾಹ್ನ ನಿರ್ಗಮಿತ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇಘಾಲಯ ವಿಧಾನಸಭೆಯ 60 ಸ್ಥಾನಗಳಲ್ಲಿ 59 ಸ್ಥಾನಗಳಿಗೆ ಫೆ.27ರಂದು ಮತದಾನ ನಡೆದಿತ್ತು. ಕಾಂಗ್ರೆಸ್ ನೇತೃತ್ವದ ಐದು ರಾಜ್ಯಗಳಲ್ಲಿ ಮೇಘಾಲಯ ಕೂಡ ಒಂದು. ಇತರ ರಾಜ್ಯಗಳೆಂದರೆ ಪಂಜಾಬ್, ಕರ್ನಾಟಕ, ಮಿಜೋರಾಂ ಮತ್ತು ಪುದುಚೇರಿ ಆಗಿವೆ.