ಬುಲಂದ್‌ಶಹರ್‌ ಗಲಭೆ: ಇಬ್ಬರ ಬಂಧನ, 27 ಮಂದಿ ವಿರುದ್ಧ ಎಫ್ಐಆರ್

ಸರ್ಕಾರ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ ರೂ.50 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇಲ್ಲದೆ, ಅಧಿಕಾರಿಯ ಪತ್ನಿಗೆ ಪಿಂಚಣಿ ನೀಡುವುದಾಗಿಯೂ ತಿಳಿಸಿದೆ. 

Last Updated : Dec 4, 2018, 11:33 AM IST
ಬುಲಂದ್‌ಶಹರ್‌ ಗಲಭೆ: ಇಬ್ಬರ ಬಂಧನ, 27 ಮಂದಿ ವಿರುದ್ಧ ಎಫ್ಐಆರ್ title=

ಬುಲಂದಶಹರ್: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದು, 27 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಹತ್ಯೆಯ ಬಳಿಕ ಬುಲಂದ್‌ಶಹರ್‌ ಪ್ರದೇಶದಲ್ಲಿ ಆಂತಕಕಾರಿ ವಾತಾವರಣ ನಿರ್ಮಾಣವಾಗಿದ್ದು, ಅಹಿತಕರಘಟನೆ ಮರುಕಳಿಸದಂತೆ ತಡೆಯಲು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ 60 ಕ್ಕೂ ಹೆಚ್ಚು ಮಂದಿಯ ಹೆಸರು ನಮೂದಿಸಲಾಗಿದೆ ಎನ್ನಲಾಗಿದೆ. 

ಹತ್ಯೆಯಾದ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮೀರುತ್'ನ ಎಡಿಜಿ ಪ್ರಶಾಂತ್ ಕುಮಾರ್ ಅವರು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ(ಎಸ್‌ಐಟಿ) ರಚಿಸಲಾಗಿದೆ. ತನಿಖೆಯ ಮಾಹಿತಿಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

ಸುಭೋಧ್ ಕುಮಾರ್ ಅವರ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಈಗಾಗಲೇ ಬಂಧನಕ್ಕೊಳಪಡಿಸಲಾಗಿದ್ದು, ಮತ್ತಷ್ಟು ಜನರನ್ನು ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸಲಾಗುತ್ತದೆ. ಈಗಾಗಲೇ ಸರ್ಕಾರ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ ರೂ.50 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇಲ್ಲದೆ, ಅಧಿಕಾರಿಯ ಪತ್ನಿಗೆ ಪಿಂಚಣಿ ನೀಡುವುದಾಗಿಯೂ ತಿಳಿಸಿದೆ. ಅಧಿಕಾರಿಯ ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ. 

ಉತ್ತರ ಪ್ರದೇಶದಾದ್ಯಾಂತ ಅಕ್ರಮ ಖಸಾಯಿ ಖಾನೆಗಳ ವಿರುದ್ಧ ಬುಲಂದ್‌ಶಹರ್‌ ಎಂಬಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿ, ಹಿಂಸಾಚಾರಕ್ಕೆ ತಿರುಗಿತ್ತು. ಅಷ್ಟೇ ಅಲ್ಲದೆ, ಪ್ರತಿಭಟನಾನಿರತರು ಪೊಲೀಸ್ ವಾಹನ ಮತ್ತು ಠಾಣೆಗೆ ಬೆಂಕಿ ಹಚ್ಚಿದ್ದರು. ಈ ಗಲಭೆಯಲ್ಲಿ ಪೋಲಿಸ್ ಅಧಿಕಾರಿ ಸುಭೋದ್ ಕುಮಾರ್ ಎಂಬುವರು ಮೃತಪಟ್ಟಿದ್ದರು. 

Trending News