ರಾಮಗಢ: ಮಹಿಳೆಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಶಿಸು ಇಬ್ಬಾಗವಾಗಿ ತಲೆ ಗರ್ಭದಲ್ಲೇ ಉಳಿದ ಆಘಾತಕಾರಿ ಘಟನೆ ರಾಜಸ್ಥಾನದ ರಾಮಘಡದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಜನವರಿ 6 ರಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಹೆಂಡತಿಯನ್ನು ತ್ರಿಲೋಕ್ ಸಿಂಗ್ ಎಂಬವರು ರಾಮಘಡ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆ ಸಮಯದಲ್ಲಿ ವೈದ್ಯರಿಲ್ಲದ ಕಾರಣ ಕಾಂಪೌಂಡರ್ ಮತ್ತು ಮತ್ತೋರ್ವ ಸಿಬ್ಬಂದಿ ಸೇರಿ ಹೆರಿಗೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹೆರಿಗೆ ಸಮಯದಲ್ಲಿ ಸಿಬ್ಬಂದಿಯ ನಿರ್ಲಕ್ಷದಿಂದಾಗಿ ಮಗು ಎರಡು ಭಾಗವಾಗಿ, ತಲೆ ಗರ್ಭದೊಳಗೇ ಉಳಿದಿದೆ.
ಕೂಡಲೇ ಕಾಂಪೌಂಡರ್ ಮತ್ತು ಮತ್ತೋರ್ವ ಸಿಬ್ಬಂದಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇಲ್ಲಿ ಸಾಧ್ಯವಿಲ್ಲ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಮಹಿಳೆಯನ್ನು ಆಸ್ಪತ್ರೆಯಿಂದ ಕಳುಹಿಸಿದ್ದಾರೆ. ಬಳಿಕ ಜೈಸಲ್ಮೇರ್ ಆಸ್ಪತ್ರೆಯಲ್ಲಿ ಮಹಿಳೆಯ ಹೆರಿಗೆ ವೇಳೆ ಪ್ಲೆಸೆಂಟಾ (ಜರಾಯು ಅಥವಾ ಹೆರಿಗೆಯ ಕಸ)ವನ್ನು ಹೊಟ್ಟೆಯಲ್ಲೇ ಬಿಡಲಾಗಿದ್ದು, ಆಕೆಯ ಹೊಟ್ಟೆಯಲ್ಲಿ ಶಿಶುವಿನ ತಲೆ ಭಾಗವಿರುವುದು ಪತ್ತೆಯಾಗಿದೆ ಎಂದು ಮಹಿಳೆಯ ಪತಿ ತ್ರಿಲೋಕ್ ಸಿಂಗ್ ಹೇಳಿದ್ದಾರೆ.
ಘಟನೆ ಸಂಬಂಧ ಐಪಿಸಿ ಸೆಕ್ಷನ್ 304ಅ ಮತ್ತು 336 ಅಡಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳಾದ ಜುಜ್ಹಾರ್ ಸಿಂಗ್ ಮತ್ತು ಅಮ್ರಿತ್ ಲಾಲ್ ವಿರುದ್ಧ ರಾಮಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಅರ್ಧಭಾಗವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.