ಭಾರತೀಯ ಸೇನಾ ದಿನಾಚರಣೆ: ಈ ದಿನದ ವಿಶೇಷತೆ ಏನು ಗೊತ್ತಾ..?

Happy Indian Army Day 2023: ಜನರಲ್ ಕೆ.ಎಂ.ಕಾರ್ಯಪ್ಪನವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ನೇಮಕಗೊಂಡರು.

Written by - Girish Linganna | Last Updated : Jan 15, 2023, 12:23 PM IST
  • ಪ್ರತಿವರ್ಷವೂ ಜನವರಿ 15ರಂದು ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ
  • ಭಾರತೀಯ ಸೇನಾ ಕಮಾಂಡರ್ ಇನ್ ಚೀಫ್ ಆಗಿ 1949ರ ಜ.15ರಂದು ಜನರಲ್ ಕೆ.ಎಂ.ಕಾರ್ಯಪ್ಪ ನೇಮಕ
  • ಭಾರತೀಯ ಸೇನಾ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಲಾಗುತ್ತದೆ
ಭಾರತೀಯ ಸೇನಾ ದಿನಾಚರಣೆ: ಈ ದಿನದ ವಿಶೇಷತೆ ಏನು ಗೊತ್ತಾ..? title=
ಭಾರತೀಯ ಸೇನಾ ದಿನಾಚರಣೆ

ಬೆಂಗಳೂರು: ಪ್ರತಿವರ್ಷವೂ ಜನವರಿ 15ರಂದು ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಗಡೆ ಆಚರಿಸಲಾಗುತ್ತಿದ್ದು, 75ನೇ ಸೇನಾ ದಿನವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ.

ಸೇನಾ ದಿನಾಚರಣೆಯ ಇತಿಹಾಸ

ಜನರಲ್ ಕೆ.ಎಂ.ಕಾರ್ಯಪ್ಪನವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ನೇಮಕಗೊಂಡರು. ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ರಾಯ್ ಬುಚರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಆ ದಿನವನ್ನು ಪೆರೇಡ್ ಹಾಗೂ ಮಿಲಿಟರಿ ಪ್ರದರ್ಶನಗಳ ಮೂಲಕ ಆಚರಿಸಲಾಗುತ್ತದೆ. ಭಾರತದ ಪಿನಾಕಾ ರಾಕೆಟ್‌ಗಳು, T-90 ಟ್ಯಾಂಕ್‌ಗಳು, BMP-2 ಇನ್‌ಫ್ಯಾಂಟ್ರಿ ಫೈಟಿಂಗ್ ವೆಹಿಕಲ್, ತುಂಗುಸ್ಕಾ ವಾಯು ರಕ್ಷಣಾ ವ್ಯವಸ್ಥೆ, 190 MM ಬೋಫೋರ್ಸ್ ಗನ್, ಲೈಟ್ ಸ್ಟ್ರೈಕ್ ವೆಹಿಕಲ್ಸ್, ಸ್ಮಾರ್ಟ್ ಸ್ಪಾನ್ ಬ್ರಿಜ್ಜಿಂಗ್ ಸಿಸ್ಟಮ್, ಹಾಗೂ ಲೈಟ್ ಸ್ಟ್ರೈಕ್ ವೆಹಿಕಲ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತೀಯ ಸೇನಾ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಲಾಗುತ್ತದೆ. ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಮನೋಜ್ ಪಾಂಡೆ ಅವರು ವೀರ ಯೋಧರಿಗೆ ಗೌರವ ನಮನ ಸಲ್ಲಿಸುತ್ತಾರೆ. ಬಳಿಕ ಯೋಧರಿಗೆ ಸೇನಾ ಶೌರ್ಯ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಕೊಡುಗೆ

ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಪ್ಪನವರಿಗೆ ಬ್ರಿಟಿಷರು ಬಿಟ್ಟು ಹೋಗಿದ್ದ ಸೇನಾಪಡೆಯನ್ನು ಒಂದು ರಾಷ್ಟ್ರೀಯ ಸೇನೆಯನ್ನಾಗಿ ರೂಪಿಸುವ ಮಹತ್ವದ ಜವಾಬ್ದಾರಿಯಿತ್ತು. ಆ ಗುರಿಯನ್ನು ಈಡೇರಿಸಲು ಕಾರ್ಯಪ್ಪನವರು 2 ಹೊಸ ಯುನಿಟ್‌ಗಳಾದ ಗಾರ್ಡ್ಸ್ ಬ್ರಿಗೇಡ್ (1958ರಿಂದ ಅದನ್ನು ಬ್ರಿಗೇಡ್ ಆಫ್ ದ ಗಾರ್ಡ್ಸ್ ಎನ್ನಲಾಗುತ್ತದೆ) ಹಾಗೂ ಪ್ಯಾರಾಶೂಟ್ ರೆಜಿಮೆಂಟ್ (1952) ಗಳನ್ನು ಸ್ಥಾಪಿಸಿದರು. ಈ ಪಡೆಗಳು ಎಲ್ಲಾ ಜಾತಿ, ವರ್ಗಗಳ ಸೈನಿಕರನ್ನು ಸೇರಿಸಿಕೊಂಡಿದ್ದ ಮೊದಲ ಪಡೆಗಳಾಗಿದ್ದವು. ಕಾರ್ಯಪ್ಪನವರು 1953ರಲ್ಲಿ ಮಿಲಿಟರಿ ಸೇವೆಯಿಂದ ನಿವೃತ್ತರಾಗಿ,1956ರ ತನಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಭಾರತೀಯ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು. ಅವರು ಸೇನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಮುಂದುವರಿಸಿ, 1965 ಮತ್ತು 1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭಗಳಲ್ಲಿ ಸೇನೆಗೆ ಭೇಟಿ ನೀಡಿ, ಸೈನಿಕರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡಿದ್ದರು.

ಅವರು ಭಾರತೀಯ ಸೇನೆ ಸದಾ ರಾಜಕೀಯದಿಂದ ದೂರವಿರಬೇಕು ಮತ್ತು ನಾಗರಿಕ ಸರ್ಕಾರದಡಿ ಕಾರ್ಯಾಚರಿಸಬೇಕೆಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರು. 1986ರಲ್ಲಿ ಭಾರತ ಸರ್ಕಾರ ಕಾರ್ಯಪ್ಪನವರನ್ನು ದೇಶಕ್ಕಾಗಿ ಅವರ ಅಪರಿಮಿತ ಸೇವೆಯನ್ನು ಪರಿಗಣಿಸಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿ ಗೌರವಿಸಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ತಮ್ಮ 94ನೇ ವಯಸ್ಸಿನಲ್ಲಿ 1993ರಲ್ಲಿ ಬೆಂಗಳೂರಿನಲ್ಲಿ ಕೊನೆಯುಸಿರೆಳದರು. ಅವರಿಗೆ ‘ಭಾರತ ರತ್ನ ಪುರಸ್ಕಾರ’ ನೀಡಬೇಕೆಂದು ಸಾಕಷ್ಟು ಒತ್ತಾಯಗಳೂ ಕೇಳಿಬಂದಿದ್ದವು. ಭಾರತದ ಪ್ರಥಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿದ್ದ ಜನರಲ್ ಬಿಪಿನ್ ರಾವತ್ ಅವರೂ ಸಹ ಈ ಬೇಡಿಕೆಗೆ ದನಿಗೂಡಿಸಿದ್ದರು.

ಮಗನಿಗಿಂತಲೂ ದೇಶ ಮಿಗಿಲೆಂದ ಕಾರ್ಯಪ್ಪ

1965ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ 36 ವರ್ಷದ ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ಕೆ.ಸಿ.ಕಾರ್ಯಪ್ಪನವರು ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದರು. ಆಗ ಅವರ ಯುದ್ಧ ವಿಮಾನದ ಮೇಲೆ ದಾಳಿ ನಡೆದು, ವಿಮಾನ ಕೆಳಗುರುಳಿತು. ಅವರನ್ನು ಪಾಕಿಸ್ತಾನಿ ಸೇನೆ ಯುದ್ಧ ಖೈದಿಯಾಗಿ ವಶಪಡಿಸಿಕೊಂಡಿತು. ವಿಚಾರಣೆಯ ಸಂದರ್ಭದಲ್ಲಿ ಕೆ.ಸಿ.ಕಾರ್ಯಪ್ಪ ಕೇವಲ ತನ್ನ ಹೆಸರು, ರ‍್ಯಾಂಕ್‌ ಮತ್ತು ಯುನಿಟ್‌ಗಳನ್ನು ಮಾತ್ರವೇ ಹೇಳಿದ್ದರು. ಆದರೆ 1 ಗಂಟೆಯ ಬಳಿಕ, ಜೈಲಿನ ಗಾರ್ಡ್‌ಗಳು ಅವರೆಡೆ ಓಡಿ ಬಂದು, ಅವರು ಕೆ.ಎಂ.ಕಾರ್ಯಪ್ಪನವರ ಮಗನೇ ಎಂದು ವಿಚಾರಿಸಿದರು.

ಕೆ.ಸಿ.ಕಾರ್ಯಪ್ಪನವರು ತಾನು ಜನರಲ್ ಕಾರ್ಯಪ್ಪನವರ ಮಗ ಎಂದು ಒಪ್ಪಿಕೊಂಡರು. ಬಳಿಕ ಸ್ವಾತಂತ್ರ್ಯಕ್ಕೂ ಮೊದಲು ಕಾರ್ಯಪ್ಪನವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಿದ್ದ, ಪಾಕಿಸ್ತಾನದ ಮಿಲಿಟರಿ ನಾಯಕ, ಜನರಲ್ ಅಯೂಬ್ ಖಾನ್ ರೇಡಿಯೋ ಮೂಲಕ ಕೆ.ಸಿ.ಕಾರ್ಯಪ್ಪನವರನ್ನು ತನ್ನ ಸೇನೆ ವಶಪಡಿಸಿಕೊಂಡಿದ್ದು, ಅವರು ಸುರಕ್ಷಿತವಾಗಿದ್ದಾರೆಂದು ಘೋಷಿಸಿದರು. ಅವರು ಕೆ.ಸಿ.ಕಾರ್ಯಪ್ಪನವರನ್ನು ಜನರಲ್ ಕಾರ್ಯಪ್ಪನವರ ಮಗನೆಂಬ ಕಾರಣಕ್ಕೆ ತಕ್ಷಣವೇ ಬಿಡುಗಡೆಗೊಳಿಸಲು ಮುಂದಾಗಿ, ನವದೆಹಲಿಯ ಪಾಕಿಸ್ತಾನದ ದೂತವಾಸ ಕಚೇರಿಗೆ ಜನರಲ್ ಕಾರ್ಯಪ್ಪನವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅವರ ಮಗನ ಆರೋಗ್ಯದ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು. ಆದರೆ ಕಾರ್ಯಪ್ಪನವರು ಈ ಯೋಜನೆಯನ್ನು ತಿರಸ್ಕರಿಸಿದರು. ಅವರು ಅಯೂಬ್ ಖಾನ್ ಬಳಿ ಪಾಕಿಸ್ತಾನ ವಶಪಡಿಸಿಕೊಂಡ ಎಲ್ಲಾ ಭಾರತೀಯ ಸೈನಿಕರೂ ನನ್ನ ಮಕ್ಕಳೇ, ಅವರೆಲ್ಲರನ್ನೂ ಪಾಕಿಸ್ತಾನಿ ಸೇನೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದಿದ್ದರು.

ತನ್ನ ಬಿಡುಗಡೆಯ ವರ್ಷಗಳ ಬಳಿಕ ಕೆ.ಸಿ.ಕಾರ್ಯಪ್ಪನವರು ಆ ಘಟನೆಯ ಬಗ್ಗೆ ಮಾತನಾಡುತ್ತಾ, ‘ನನ್ನ ತಂದೆ ಅಪಾರ ಶಿಸ್ತಿನ ವ್ಯಕ್ತಿ. ಅವರಿಗೆ ಅವರ ಮಗ ಮತ್ತು ಎಲ್ಲಾ ಭಾರತೀಯ ಸೈನಿಕರೂ ಒಂದೇ ಆಗಿದ್ದರು. ಅಯೂಬ್ ಖಾನ್ ಅವರು ತಂದೆಯವರ ಹಳೆಯ ಸಹಯೋಗಿಯಾಗಿದ್ದರೂ, ತಂದೆಯವರಿಗೆ ಮೊದಲು ಆತ್ಮೀಯರಾಗಿದ್ದವರಾದರೂ, ತಂದೆಯವರು ನನ್ನನ್ನು ಬೇರೆ ಸೈನಿಕರಿಗಿಂತ ಮೊದಲು ಬಿಡುಗಡೆ ಮಾಡದಂತೆಯೇ ಹೇಳಿದ್ದರು. ನಾನೂ ಸಹ ಇತರ ಸೈನಿಕರೊಡನೆಯೇ ಬಿಡುಗಡೆ ಹೊಂದಿದೆ’ ಎಂದಿದ್ದರು.

ಶತ್ರುಗಳೂ ಗೌರವಿಸುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

ಭಾರತ-ಪಾಕಿಸ್ತಾನ ಯುದ್ಧ ಕೊನೆಗೊಂಡ ಬಳಿಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭಾರತೀಯ ಸೈನಿಕರಿಗೆ ಉತ್ತೇಜನ ನೀಡಲು ಗಡಿಗೆ ಭೇಟಿ ನೀಡಿದರು. ಆ ಭೇಟಿಯ ಸಂದರ್ಭದಲ್ಲಿ ಅವರು ಗಡಿಯನ್ನು ದಾಟಿ, ‘ನೋ ಮ್ಯಾನ್ಸ್ ಲ್ಯಾಂಡ್’ ಪ್ರವೇಶಿಸಿದರು. ಜನರಲ್ ಕಾರ್ಯಪ್ಪನವರ ಜೀವನ ಚರಿತ್ರೆಯಲ್ಲಿ ಈ ಘಟನೆಯನ್ನು ನಂದಾ ಕಾರ್ಯಪ್ಪನವರು ಪ್ರಸ್ತಾಪಿಸುತ್ತಾರೆ. ‘ಕಾರ್ಯಪ್ಪನವರನ್ನು ನೋಡಿದ ತಕ್ಷಣ, ಪಾಕಿಸ್ತಾನಿ ಕಮಾಂಡರ್ ಅವರನ್ನು ಅಲ್ಲಿಯೇ ನಿಲ್ಲುವಂತೆ ಆದೇಶಿಸಿದರು. ಒಂದು ವೇಳೆ ಮುಂದೆ ಬಂದರೆ ಅವರನ್ನು ಶೂಟ್ ಮಾಡುವುದಾಗಿ ಹೇಳಿದರು. ಆಗ ಭಾರತೀಯ ಸೇನೆಯ ಸೈನಿಕರು ಯಾರೋ ಅವರು ಜನರಲ್ ಕಾರ್ಯಪ್ಪ ಎಂದು ಜೋರಾಗಿ ಕೂಗಿ ಹೇಳಿದರು. ಅದನ್ನು ಕೇಳುತ್ತಿದ್ದ ಹಾಗೇ ಪಾಕಿಸ್ತಾನಿ ಸೈನಿಕರು ತಮ್ಮ ಆಯುಧಗಳನ್ನು ಕೆಳಗಿಳಿಸಿದರು. ಪಾಕಿಸ್ತಾನಿ ಅಧಿಕಾರಿಗಳು ಕಾರ್ಯಪ್ಪನವರ ಬಳಿ ಬಂದು ಅವರಿಗೆ ಸೆಲ್ಯೂಟ್ ಮಾಡಿದ್ದರು.

ಕಾರ್ಯಪ್ಪನವರ ನಂಬಿಕೆ

‘ಒಬ್ಬ ವ್ಯಕ್ತಿ ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ ಅಥವಾ ಕ್ರೈಸ್ತ ಯಾವ ಧರ್ಮೀಯನೇ ಆಗಿರಲಿ. ಅವನು ದೇಶಕ್ಕೆ ಹೇಗೆ ಸೇವೆ ಸಲ್ಲಿಸುತ್ತಾನೆ ಎನ್ನುವುದನ್ನು ಮಾತ್ರ ನಾನು ಗಮನಿಸುತ್ತೇನೆಯೇ ಹೊರತು ಅವನ ಧರ್ಮವನ್ನಲ್ಲ. ಒಬ್ಬ ಭಾರತೀಯ ಕೊನೆಯ ಉಸಿರಿನವರೆಗೂ ಭಾರತೀಯನಾಗಿಯೇ ಇರುತ್ತಾನೆ. ನನ್ನ ಪ್ರಕಾರ ಎರಡೇ ಸ್ಥಾನಗಳಿವೆ. ಒಂದು ಹಿಂದೂಸ್ತಾನ, ಇನ್ನೊಂದು ಫೌಜಿಸ್ತಾನ’ ಎಂದಿದ್ದರು ಕಾರ್ಯಪ್ಪ. ಅವರ ಈ ಮಾತುಗಳೇ ಅವರಿಗಿದ್ದ ಅಪಾರ ದೇಶಪ್ರೇಮದ ಸಾಕ್ಷಿಯಾಗಿದ್ದವು. ಅವರ ಜಾತ್ಯಾತೀತ ನಿಲುವುಗಳನ್ನು ಅವರು ಕೊನೆ ಉಸಿರಿನ ತನಕವೂ ಎತ್ತಿ ಹಿಡಿದಿದ್ದರು. ಎಲ್ಲಾ ಬಡ್ತಿಗಳು, ದೇಶದ ರಾಜಕೀಯ ಮತ್ತು ಅಧಿಕಾರದ ಏಳು ಬೀಳುಗಳ ಮಧ್ಯೆಯೂ ಕಾರ್ಯಪ್ಪನವರು ತನ್ನ ನಂಬಿಕೆಗಳನ್ನು ಕಾಪಾಡಿಕೊಂಡು ಬಂದಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News