ನವದೆಹಲಿ: 1984 ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಹೆಸರಿಸುವ ಪ್ರಕರಣವನ್ನು ಶೀಘ್ರದಲ್ಲೇ ಪುನಃ ತೆರೆಯಬಹುದು, ಇದಕ್ಕೆ ಪೂರಕವಾಗಿ ಈಗಾಗಲೇ ಅಮಿತ್ ಶಾ ಅವರ ಗೃಹ ಸಚಿವಾಲಯ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದು ಈ ಬೆಳವಣಿಗೆಗಳಿಗೆ ಪುಷ್ಟಿ ನೀಡಿದೆ.
ಅಗುಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿಯನ್ನು ಬಂಧಿಸಿದ ಕೆಲ ದಿನಗಳ ನಂತರ ಸಚಿವಾಲಯದ ನಿರ್ಧಾರ ಬಂದಿದೆ. ಕಳೆದ ತಿಂಗಳು ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಕೇಂದ್ರ ತನಿಖಾ ದಳವೂ ಬಂಧಿಸಿತ್ತು.
1984 ರಲ್ಲಿನ ಗಲಭೆಗೆ ಸಂಬಂಧಿಸಿದಂತೆ ಕಮಲ್ ನಾಥ್ ತಮ್ಮ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಮಧ್ಯಪ್ರದೇಶ ಹಾಗೂ ಪಂಜಾಬ್ ನಲ್ಲಿ ಪ್ರತಿಭಟನೆಗಳು ನಡೆದಿದ್ದವು. 1984 ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಅಂಗರಕ್ಷಕರು ಗುಂಡಿಕ್ಕಿ ಕೊಂದ ನಂತರ ಕಮಲ್ ನಾಥ್ ಹಾಗೂ ಪಕ್ಷದ ನಾಯಕರಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರೊಂದಿಗೆ ಸೇರಿ ಜನರನ್ನು ಗಲಭೆಗೆ ಪ್ರಚೋದಿಸಿದ್ದರು ಎನ್ನುವ ಆರೋಪ ಅವರ ಮೇಲಿದೆ.
ಕಮಲ್ ನಾಥ್ ಅವರು ಕೇಂದ್ರ ದೆಹಲಿಯ ರಾಕಬ್‌ಗಂಜ್ ಗುರುದ್ವಾರದ ಹೊರಗೆ ಜನಸಮೂಹವನ್ನು ಮುನ್ನಡೆಸಿ ಇಬ್ಬರು ಸಿಖ್ಖರು ತಮ್ಮ ಸಮ್ಮುಖದಲ್ಲಿ ಹತ್ಯೆಗಯ್ಯಲಾಯಿತು ಎನ್ನುವ ಬಗ್ಗೆ ಸಾಕ್ಷಿದಾರರು ಆರೋಪಿಸಿದ್ದರು. ಈ ಘಟನೆ ನಡೆದಾಗ ಕಮಲ್ ನಾಥ್ ಸ್ಥಳದಲ್ಲಿದ್ದರು ಎಂದು ಅವರನ್ನು ಸಂಪರ್ಕಿಸಿದ್ದ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ ಸಂಜಯ್ ಸೂರಿ ಸೇರಿದಂತೆ ಇಬ್ಬರು ವ್ಯಕ್ತಿಗಳಿಂದ ಆಯೋಗವು ಸಾಕ್ಷ್ಯಗಳನ್ನು ಕೇಳಿತ್ತು. ಈ ಸಂದರ್ಭದಲ್ಲಿ ತಾವು ಹಾಜರಿದ್ದನ್ನು ಒಪ್ಪಿಕೊಂಡ ಕಮಲ್ ನಾಥ್, ಆದರೆ ತಾವು ಅಲ್ಲಿ ಜನರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್ ಕುಮಾರ್ ಸೇರಿದಂತೆ 88 ಜನರ ಮೇಲಿನ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಕಳೆದ ವರ್ಷ ಎತ್ತಿಹಿಡಿದಿತ್ತು.1984 ರ ಗಲಭೆಯಲ್ಲಿ 220 ಕ್ಕೂ ಹೆಚ್ಚು ಮುಚ್ಚಿದ ಪ್ರಕರಣಗಳ ತನಿಖೆಗಾಗಿ ಕೇಂದ್ರವು ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲು ನಿರ್ಧರಿಸಿದ ಎರಡು ವರ್ಷಗಳ ನಂತರ ನ್ಯಾಯಾಲಯದ ಈ ತೀರ್ಮಾನಕ್ಕೆ ಬಂದಿದ್ದು, ಇದನ್ನು ಮಾಜಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನರಮೇಧ ಎಂದು ಬಣ್ಣಿಸಿದ್ದರು.