Heartbreaking video: ತಂದೆಯ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ನಟ ಮಹೇಶ್ ಬಾಬು

ಟಾಲಿವುಡ್ ಸೂಪರ್‌ಸ್ಟಾರ್ ಕೃಷ್ಣರವರು ಶ್ರೀದೇವಿ, ಜಯಪ್ರದಾ ಮತ್ತು ವಿಜಯ ಶಾಂತಿ ಸೇರಿ 1980ರ ದಶಕದ ಪ್ರಮುಖ ನಟಿಯರೊಂದಿಗೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Written by - Puttaraj K Alur | Last Updated : Nov 16, 2022, 07:34 PM IST
  • ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಆಘಾತಗಳ ಮೇಲೆ ಆಘಾತ
  • ಒಂದೇ ವರ್ಷದಲ್ಲಿ ಮೂವರ ನಿಧನದಿಂದ ಕಂಗೆಟ್ಟ ಘಟ್ಟಮನೇನಿ ಕುಟುಂಬಸ್ಥರು
  • ತಂದೆ ಕೃಷ್ಣರವರ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ಮಹೇಶ್ ಬಾಬು ವಿಡಿಯೋ ವೈರಲ್
Heartbreaking video: ತಂದೆಯ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ನಟ ಮಹೇಶ್ ಬಾಬು title=
ಕಣ್ಣೀರು ಹಾಕಿದ ಮಹೇಶ್ ಬಾಬು!

ನವದೆಹಲಿ: ಘಟ್ಟಮನೇನಿ ಕುಟುಂಬಕ್ಕೆ ಇದು ದುರಂತ ವರ್ಷ ಅಂತಾನೇ ಹೇಳಬಹುದು. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ವೈಯಕ್ತಿಕವಾಗಿ ಕಷ್ಟದ ವರ್ಷವನ್ನು ಎದುರಿಸಿದ್ದಾರೆ. ವರ್ಷದ ಆರಂಭದಲ್ಲಿ ತಮ್ಮ ಹಿರಿಯ ಸಹೋದರ ರಮೇಶ್ ಬಾಬು ಅವರನ್ನು ಕಳೆದುಕೊಂಡಿದ್ದ ಮಹೇಶ್ ಬಾಬು ಸೆಪ್ಟೆಂಬರ್‌ನಲ್ಲಿ ತಮ್ಮ ತಾಯಿ ಇಂದಿರಾದೇವಿಯವರನ್ನು ಕಳೆದುಕೊಂಡರು. ಇದೀಗ ಅವರ ತಂದೆ, ಟಾಲಿವುಡ್ ಸೂಪರ್‌ಸ್ಟಾರ್ ಕೃಷ್ಣ ಅವರ ನಿಧನದಿಂದ ನಟನಿಗೆ ದೊಡ್ಡ ಆಘಾತವುಂಟಾಗಿದೆ.

ನಟ ಮಹೇಶ್‌ ಬಾಬು ಕುಟುಂಬ ಇದೀಗ ಅಕ್ಷರಶಃ ದುಃಖದಲ್ಲಿ ಮುಳುಗಿದೆ. ಕಳೆದ ಒಂದೇ ವರ್ಷದಲ್ಲಿ ಅವರ ಕುಟುಂಬದಲ್ಲಿ ಮೂವರು ನಿಧನರಾದಂತಾಗಿದೆ. ಹೀಗಾಗಿ ಸ್ಟಾರ್ ನಟ ಮಹೇಶ್ ಬಾಬು ಈಗ ದುಃಖದ ಮಡುವಿನಲ್ಲಿದ್ದಾರೆ. 1960, 70 ಮತ್ತು 80ರ ದಶಕಗಳಲ್ಲಿ ತೆಲುಗು ಚಿತ್ರ ಜಗತ್ತನ್ನು ಆಳಿದ್ದ ಘಟ್ಟಮನೇನಿ ಶಿವರಾಮ ಕೃಷ್ಣ ಅವರು ಸೂಪರ್ ಸ್ಟಾರ್ ಕೃಷ್ಣ ಎಂದೇ ಖ್ಯಾತರಾಗಿದ್ದರು. ತೆಲುಗು ಚಿತ್ರೋದ್ಯಮಕ್ಕೆ ಇದು ತುಂಬಲಾರದ ದೊಡ್ಡ ನಷ್ಟವುಂಟು ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಮಂಗಳವಾರ ಬೆಳಗ್ಗೆ ತಮ್ಮ ಆಂಧ್ರ ‘ಜೇಮ್ಸ್ ಬಾಂಡ್’ಅನ್ನು ಕಳೆದುಕೊಂಡು ದುಃಖ ವ್ಯಕ್ತಪಡಿಸಿದ್ದಾರೆ. ಹೃದಯಾಘಾತದಿಂದ ಬಳಲುತ್ತಿದ್ದ ಕೃಷ್ಣರವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಈ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಗಜ ನಟರು, ನಿರ್ಮಾಪಕರು, ರಾಜಕಾರಣಿಗಳು ಸಾಲುಗಟ್ಟಿ ನಿಂತು ಶ್ರದ್ಧಾಂಜಲಿ ಸಲ್ಲಿಸಿದರು. ತಂದೆಯ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಮಹೇಶ್ ಬಾಬು ತಮ್ಮ ಮನೆಯ ಬಾಗಿಲಿನಲ್ಲಿಯೇ ನಿಂತುಕೊಂಡಿದ್ದರು. ಅವರ ಮೊಗದಲ್ಲಿ ದುಃಖ ಮಡುಗಟ್ಟಿತ್ತು.

ಇದನ್ನೂ ಓದಿ: ನಟನೆಯಷ್ಟೇ ಅಲ್ಲ, ಕ್ರಿಕೆಟ್‌ನಲ್ಲೂ ಸೈ ʼಕಾಂತಾರʼ ಲೀಲಾ : ವಿಡಿಯೋ ನೋಡಿ..!

ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ನಟ ಮಹೇಶ್ ಬಾಬುರವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮಹೇಶ್ ಬಾಬು ಕಣ್ಣೀರು ಹಾಕುತ್ತಿರುವ ವಿಡಿಯೋ ಅವರ ಲಕ್ಷಾಂತರ ಅಭಿಮಾನಿಗಳಿಗೂ ಸಹ ದುಃಖ ತರಿಸಿದೆ. ಗಣ್ಯರು ತಬ್ಬಿಕೊಂಡು ಸಾಂತ್ವನ ಹೇಳುವಾಗ ಮಹೇಶ್ ಬಾಬು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್ ಬಾಬು ದುಃಖದಲ್ಲಿ ಕಣ್ಣೀರು ಹಾಕುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಿಂತೆಯೇ ಅವರ ಲಕ್ಷಾಂತರ ಜನರು ನಟನಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘‘Stay Strong Mahesh Babu’’ ಮತ್ತು ‘‘We are with Ghattamaneni family’’ ಎನ್ನುವ ಹ್ಯಾಶ್‍ಟ್ಯಾಗ್‍ಗಳು ಟ್ರೆಂಡಿಂಗ್ ಆಗಿದ್ದವು.   

ತೆಲುಗಿನಲ್ಲಿ ಅಗ್ರಗಣ್ಯ ನಟರಾಗಿ  ಗುರುತಿಸಿಕೊಂಡಿದ್ದ ಕೃಷ್ಣರವರು ಕೇವಲ ನಟನೆ ಮಾತ್ರವಲ್ಲದೇ ನಿರ್ದೇಶನ-ನಿರ್ಮಾಪಕರಾಗಿಯೂ ಹೆಸರು ಮಾಡಿದ್ದರು. 1960ರಲ್ಲಿ ಸಿನಿಮಾ ಜರ್ನಿ ಆರಂಭಿಸಿದ್ದ ಕೃಷ್ಣರವರು ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. 6 ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿದ್ದ ಕೃಷ್ಣರವರು ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಕೃಷ್ಣರವರ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.

ಇದನ್ನೂ ಓದಿ: ತಲೈವಾ ರಜನಿಕಾಂತ್‌ ಕೊಟ್ಟಿದ್ದ ಗೋಲ್ಡನ್‌ ಗಿಫ್ಟ್ ರಿವೀಲ್‌ ಮಾಡಿದ ರಿಷಬ್‌ ಶೆಟ್ಟಿ

ಶ್ರೀದೇವಿ, ಜಯಪ್ರದಾ ಮತ್ತು ವಿಜಯ ಶಾಂತಿ ಸೇರಿದಂತೆ 1980ರ ದಶಕದ ಪ್ರಮುಖ ನಟಿಯರೊಂದಿಗೆ ಕೃಷ್ಣರವರು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣರವರು ಹೈದರಾಬಾದ್‌ನಲ್ಲಿರುವ ಪದ್ಮಾಲಯ ಸ್ಟುಡಿಯೋಸ್‌ನೊಂದಿಗೆ ಚಲನಚಿತ್ರೋದ್ಯಮಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು. ರಾಜಕೀಯದಲ್ಲಿಯೂ ತೊಡಗಿಸಿಕೊಂಡಿದ್ದ ಅವರು ಕಾಂಗ್ರೆಸ್ ಟಿಕೆಟ್‍ನೊಂದಿಗೆ ಸ್ಪರ್ಧಿಸಿ ಕರಾವಳಿ ಆಂಧ್ರದ ಎಲೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಕೃಷ್ಣರವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News