ಇಂದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನ

    

Last Updated : Jan 3, 2018, 02:51 PM IST
ಇಂದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನ title=
Photo Courtesy: YouTube

ಸಾವಿತ್ರಿಬಾಯಿ ಪುಲೆ ಭಾರತದ ಇತಿಹಾಸದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ದಾಖಲಾಗಿದ್ದಾರೆ. ಪತಿ ಜ್ಯೋತಿಬಾಪುಲೆಯವರ ಜೊತೆ ಸೇರಿ ಮಹಿಳೆಯರ ಹಾಗೂ ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದರು ಅಂತಹ ಮಹಾನ್ ಮಹಿಳೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನವರಿ 3 1831ರಂದು  ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಮ್ ನಲ್ಲಿ ಜನಿಸಿದ ಸಾವಿತ್ರಿಬಾಯಿ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಜ್ಯೋತಿರಾವ್ ಪುಲೆಯವರನ್ನು ಮದುವೆಯಾದರು.

ಮುಂದೆ ಜೀವನವನ್ನು ಬಹುಸಂಖ್ಯಾತ ಸಮುದಾಯದ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು. ಆದರೆ ಅವರ ಈ ಎಲ್ಲ ಶೋಷಿತ ಸಮುದಾಯಗಳಿಗೆ ನೀಡಿರುವ ಕೊಡುಗೆಯನ್ನು ಸಾರ್ವಜನಿಕ ವಲಯ ಕಡೆಗಣಿಸಿದೆ ತಮ್ಮ ಪತಿ ಜೋತಿಭಾ ಫುಲೆ ಜೊತೆ ಸೇರಿ ಪ್ರಾರಂಭಿಸಿದ ಮೊದಲ ಹೆಣ್ಣು ಮಕ್ಕಳ ಶಾಲೆಗೆ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು.ಆದ್ದರಿಂದ ಅವರನ್ನು  ಭಾರತದ ಮೊದಲ ಶಿಕ್ಷಕಿ ಎಂದು ಕರೆಯುತ್ತಾರೆ.
 
ಮೇಲ್ವರ್ಗದ ಜನರು ಸಾವಿತ್ರಿಬಾಯಿಯವರು ಒಬ್ಬ ಮಹಿಳೆ ಮತ್ತು ಹಿಂದುಳಿದ ವರ್ಗದವಳು ಎನ್ನುವ 
ಕಾರಣಕ್ಕಾಗಿ ಅವರ ಮೇಲೆ ಕೆಸರನ್ನು ಎಸೆದರು. ಆದರೆ ಇದ್ಯಾವುದೂ ಕೂಡಾ ಅವರನ್ನು ಸಾಮಾಜಿಕ ಸುಧಾರಣೆ ಯತ್ನದಿಂದ ಹಿಂದೆ ಸರಿಯಲಿಲ್ಲ ಸಾವಿತ್ರಿ ತಾಯಿ ಯವರ ಕಲಿಕೆಯ ಭೋಧನಾ ಮಾದರಿಯು, ಪಾಲ್ಗೊಳ್ಳುವಿಕೆ, ಸೃಜನಶೀಲತೆಯಿಂದ ಕೂಡಿತ್ತು, ಆಗ ಅಸ್ತಿತ್ವದಲ್ಲಿದ್ದ ವೈದಿಕ ಶಾಹಿವ್ಯವಸ್ಥೆಯ ಪ್ರತಿಬಂಧಕ ಕಲಿಕೆಗಿಂತ ಭಿನ್ನವಾಗಿತ್ತು. ವಿದ್ಯಾರ್ಥಿಗಳಿಗೆ ವಿಭಿನ್ನವಾಗಿ ಚಿಂತನೆಗಳನ್ನು ತುಂಬಿದರು.

ಇದರಿಂದ 11 ವರ್ಷದ ಶೋಷಿತ ಸಮುದಾಯದ  ಮುಕ್ತಾಭಾಯಿ ಎನ್ನುವ ವಿದ್ಯಾರ್ಥಿನಿಯು 1855 ರಲ್ಲಿ ದಲಿತ ಸಮುದಾಯದ ಸಮಸ್ಯೆಗಳ  ಕುರಿತು 'ಧ್ಯಾನೋದಯ' ಎನ್ನುವ ಪತ್ರಿಕೆಗೆ ಲೇಖನಗಳನ್ನು ಬರೆದರು. ಆದ್ದರಿಂದ ಈ ಲೇಖನ ದಲಿತ ಮಹಿಳೆಯೊಬ್ಬಳು ತಮ್ಮ ಸಮುದಾಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಮೊದಲ ಬರಹ ಎನ್ನಬಹುದು. ವಿಧ್ಯಾರ್ಥಿಗಳಲ್ಲಿ ಆಧುನಿಕ ಚಿಂತನೆಗಳನ್ನು ತುಂಬಿದರು.

ಸಾಮಾಜಿಕ ಬದಲಾವಣೆಯನ್ನು ತಳಮಟ್ಟದಿಂದಲೇ ಬದಲಾಗಬೇಕೆಂದು ಬಯಸಿದ್ದ ಅವರು, ಆಗಿನ ಕಟು ಸಂಪ್ರದಾಯ ನೀತಿ ಪದ್ಧತಿಗಳನ್ನು ತಿರಸ್ಕರಿಸಿದರು. ಅವರ  ಕಾರ್ಯಗಳಿಗೆ ಪತಿ ಜ್ಯೋತಿ ಬಾಫುಲೆ ಬೆಂಬಲವಾಗಿ ನಿಂತರು. ಸಾವಿತ್ರಿಬಾಯಿಯವರು ಹಳೆಯ ಸಂಪ್ರದಾಯಗಳಿಗೆ ಅಂತ್ಯಹಾಡಿ, ಅಂತರಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಅಂತ ದಂಪತಿಗಳಿಗೆ ಆಶ್ರಯವನ್ನು ನೀಡಿದರು.

ತಮ್ಮ ಸಮಾಜ ಕಾರ್ಯದ ಭಾಗವಾಗಿ ಶಾಲಾ ಸಂಸ್ಥೆ . ಮಹಿಳಾ ಸೇವಾ ಮಂಡಳ(1852) ,ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆ(1855), ಅನಾಥ ಆಶ್ರಮ(1863), ಶಿಶು ಹತ್ಯೆ ನಿಷೇಧದ ಆಶ್ರಮ(1853), ಭೀಕರ ಬರಗಾಲ ನಿರ್ವಹಿಸಲು ಆಹಾರ ಕೇಂದ್ರಗಳ ಸ್ಥಾಪನೆ(1875-77), ಈ ಮೂಲಕ ಅವರು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಬರಪರಿಹಾರದಂತಹ ಸಮಾಜ ಸುಧಾರಣೆಯಂತಹ ಕಾರ್ಯಗಳನ್ನು ಕೈಗೊಂಡರು . ಮಾರ್ಚ್ 10 1897 ರಂದು  ತಮ್ಮ 66 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇಂತಹ  ಹಲವಾರು ಸಮಾಜಮುಖಿ ಕಾರ್ಯಗಳಮೂಲಕ  ಇಂದಿಗೂ ಕೂಡ ಜನ ಮನದಲ್ಲಿ ನೆಲೆಯೂರಿದ್ದಾರೆ. 

 

Trending News