ಮೈಸೂರು: ಯದುವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ಗೆ ಸಿದ್ದತೆ ನಡೆದಿದ್ದು, ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ ಪರಂಪರೆಯ ಸಂಪ್ರದಾಯವನ್ನು ಮುಂದುವರೆಸಲಿದ್ದಾರೆ.
ಸೆಪ್ಟೆಂಬರ್ 21ರಂದು ಅಂದರೆ ನಾಳೆ ಬೆಳಿಗ್ಗೆ 7.55 ರಿಂದ 8.15ರೊಳಗಿನ ಶುಭ ಮುಹೂರ್ತದಲ್ಲಿ ಚಿನ್ನದ ಸಿಂಹಾಸನಕ್ಕೆ ಸಿಂಹದ ಮೂರ್ತಿಯನ್ನು ಜೋಡಣೆ ಮಾಡುವ ಕಾರ್ಯ ನೆರವೇರಲಿದೆ. ನಂತರ 8.20ರಿಂದ 9.10 ರೊಳಗೆ ಮಹಾರಾಜ ಯಧುವೀರ್ಗೆ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಕಂಕಣಧಾರಣೆ ಮಹೋತ್ಸವ ನೆರವೇರಲಿದೆ.
11.15ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಸವಾರಿ ತೊಟ್ಟಿಗೆ ಆಗಮಿಸಲಿವೆ. 12 ಗಂಟೆಗೆ ಕಳಸ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ.12.45 ರಿಂದ 12.55ರ ಶುಭಘಳಿಗೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರು ಆರಂಭವಾಗಲಿದೆ. 1.35 ರಿಂದ 1.45 ವರೆಗೆ ಚಾಮುಂಡಿತೊಟ್ಟಿಯಲ್ಲಿರುವ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿಯ ಮೂರ್ತಿಯನ್ನು ಕನ್ನಡಿ ತೊಟ್ಟಿಗೆ ಸ್ಥಳಾಂತರಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು.
ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.15 ರಿಂದ 9.45ರೊಳಗಿನ ಶುಭ ಮಹೂರ್ಥದಲ್ಲಿ ಸರಸ್ವತಿ ಪೂಜೆ ನೆರವೇರಲಿದೆ, ನಂತರ ಅಂದು ರಾತ್ರಿ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನೆರವೇರಲಿದೆ.
ಸೆಪ್ಟೆಂಬರ್ 29 ರಂದು ಬೆಳಿಗ್ಗೆ 6.15ಕ್ಕೆ ಚಂಡಿಹೋಮ ನೆರವೇರಲಿದೆ, 6.45 ರಿಂದ 7.45 ರೊಳಗಿನ ಶುಭ ಘಳಿಗೆಯಲ್ಲಿ ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ವಿವಿಧ ಆಯುಧಗಳನ್ನು ಕೋಡಿಸೋಮೇಶ್ವರ ದೇವಾಲಯಕ್ಕೆ ರವಾನಿಸಲಾಗುವುದು.
ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದ ಬಳಿಕ 8.20ರಿಂದ 8.40ರವರೆಗೆ ಅರಮನೆಯ ಕಲ್ಯಾಣಮಂಟಪದಲ್ಲಿ ಯದಿವೀರ್ ರಿಂದ ಆಯುಧಪೂಜೆ ನೆರವೇರಲಿದೆ.
ಅಂದು ರಾತ್ರಿ 7 ಗಂಟೆಗೆ ಖಾಸಗಿ ದರ್ಬಾರ್ ಮುಕ್ತಾಯವಾಗಲಿದ್ದು, ಚಿನ್ನದ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹದ ಮೂರ್ತಿಯನ್ನು ಬೇರ್ಪಡಿಸಲಾಗುವುದು.
ಸೆಪ್ಟೆಂಬರ್ 30 ರಂದು 12 ಗಂಟೆಗೆ ಶಮಿವೃಕ್ಷದ ಸಮೀಪ ಶಮಿ ಉತ್ತರ ಪೂಜೆ ನೆರವೇರಲಿದೆ. ಅರಮನೆಯ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇವಾಲಯದಿಂದ ಯದುವೀರ್ ವಿಜಯಯಾತ್ರೆ ಆರಂಭಿಸಲಿದ್ದಾರೆ, ನಂತರ ಚಾಮುಂಡೇಶ್ವರಿಯ ಮೂರ್ತಿಯನ್ನು ಕನ್ನಡಿ ತೊಟ್ಟಿಯಿಂದ, ಚಾಮುಂಡಿ ತೊಟ್ಟಿಗೆ ಸ್ಥಳಾಂತರಿಸಲಾಗುತ್ತದೆ.
ಅಕ್ಟೋಬರ್ 14 ರಂದು ಬೆಳಿಗ್ಗೆ 10.45 ರಿಂದ 11.45ರೊಳಗಿನ ಶುಭ ಮುಹೂರ್ಥದಲ್ಲಿ ಚಿನ್ನದ ಸಿಂಹಾಸನವನ್ನು ಸ್ವಸ್ಥಾನಕ್ಕೆ ಸೇರಿಸುವ ಮೂಲಕ ರಾಜಮನೆತನದ ದಸರಾ ಕಾರ್ಯಕ್ರಮಗಳು ಸಮಾಪ್ತಿಯಾಗಲಿವೆ ಎಂದು ರಾಜಮನೆತನದ ಆಪ್ತ ಮೂಲಗಳಿಂದ ಲಭ್ಯವಾಗಿವೆ.