ಮೈಸೂರು : ಪ್ರತಿವರ್ಷ ರಂಗಾಯಣದಲ್ಲಿ ನಡೆಯುವ 'ಬಹುರೂಪಿ' ರಾಷ್ಟ್ರೀಯ ನಾಟಕೋತ್ಸವಕ್ಕೆ ಇದೇ ಜ.14 ರಿಂದ 21ರವರೆಗೆ ನಡೆಯಲಿದೆ. ಈ ಬಾರಿ 'ವಲಸೆ' ವಿಷಯವನ್ನು ಆಧರಿಸಿ ನಾಟಕೋತ್ಸವ ಆಯೋಜಿಸಲಾಗಿದ್ದು, 8 ದಿನಗಳ ಕಾಲ ನಡೆಯಲಿದೆ.
ಜ.14 ರಂದು ಸಂಜೆ 5.30ಕ್ಕೆ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜ.14ರಿಂದ 21ರವರೆಗೆ ಚಲನಚಿತ್ರೋತ್ಸವ ಶ್ರೀರಂಗದಲ್ಲಿ ನಡೆಯಲಿದೆ. ಕಲಾವಿದೆ ವಿಜಯಲಕ್ಷ್ಮೇ ಸಿಂಗ್ ಇದರ ಉದ್ಘಾಟನೆ ಮಾಡಲಿದ್ದಾರೆ. ಜೈ ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಬೆ.10.30, ಮ.12, ಮ.2ಕ್ಕೆ ಚಿತ್ರಗಳ ಪ್ರದರ್ಶನ ನಡೆಯಲಿದೆ.
ದೇಶದ ವಿವಿಧ ರಾಜ್ಯಗಳ 9 ನಾಟಕಗಳು, 9 ಕನ್ನಡ ನಾಟಕಗಳು ಮತ್ತು 6 ಏಕವ್ಯಕ್ತಿ ನಾಟಕಗಳು ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿವೆ. ಜ.14ರಿಂದ ಆರಂಭವಾಗುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 24 ಚಲನಚಿತ್ರಗಳು ಪ್ರದರ್ಶನ ಕಾಣಲಿವೆ. ಜ.20 ಮತ್ತು 21ರಂದು ವಲಸೆ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ಲೇಖಕಿ ನಂದಿತಾ ಹಕ್ಸರ್, ಪತ್ರಕರ್ತ ಪಿ.ಸಾಯಿನಾಥ್ ಭಾಗಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ, "ದೇಶದಲ್ಲಿ ಇಂದು ಬಹಳಷ್ಟು ವಲಸೆ ಸಮಸ್ಯೆಯಿದೆ. ವಲಸಿಗರು ಹೆಚ್ಚಾಗಿ ಕಂಡು ಬರುವ ಅಸ್ಸಾಂನಲ್ಲಿ ಯಾರಿಗೂ ಆಧಾರ್ ಕಾರ್ಡ್ ಇಲ್ಲ. ಈ ರೀತಿಯ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಬಹುರೂಪಿ ನಾಟಕೋತ್ಸವವನ್ನು 'ವಲಸೆ' ವಿಷಯ ಕುರಿತೇ ರೂಪಿಸಲಾಗಿದೆ ಎಂದು ತಿಳಿಸಿದರು.
ನಾಟಕೋತ್ಸವದಲ್ಲಿ ನಾಟಕಗಳಿಗೆ 50 ರೂ. ನಿಗದಿ ಮಾಡಲಾಗಿದೆ. ದಿನಕ್ಕೆ ಒಬ್ಬರು ಕನಿಷ್ಟ 2 ನಾಟಕ ನೋಡುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ರಾಷ್ಟ್ರೀಯ ನಾಟಕೋತ್ಸವದಲ್ಲಿ ಯುವ ಜನಾಂಗವನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳಿಗೆ ಜಾನಪದ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅವರಿಗೆ ತರಬೇತಿಗೆ ತಜ್ಞರನ್ನು ನೇಮಿಸಲಾಗಿದೆ. ಕಿಂದರಿಜೋಗಿಯಲ್ಲಿ ಸಂ.4.30ರಿಂದ ಬೀದಿ ನಾಟಕ, ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಅಲ್ಲದೆ, ಬಹುರೂಪಿಯಲ್ಲಿ 70 ಮಳಿಗೆಗಳಿಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಸೀಯ ಆಹಾರ ಪದ್ಧತಿಯ ಪ್ರದರ್ಶನ ಮಳಿಗೆಗೂ ಅವಕಾಶ ಕಲ್ಪಿಸಲಾಗಿದ್ದು, ರಂಗಪ್ರಿಯರು ವಿವಿಧ ರುಚಿಕರವಾದ ಖಾದ್ಯಗಳ ಸವಿ ಸವಿಯಬಹುದು.