ಕೊರೊನಾ ವೈರಸ್ ಪ್ರಕೋಪ ಆರಂಭವಾಗುತ್ತಿದ್ದಂತೆ ತನ್ನ ಎಲ್ಲ ನೌಕರರನ್ನು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿರುವ ಕಂಪನಿಗಳಲ್ಲಿ ಟ್ವಿಟ್ಟರ್ ಕೂಡ ಒಂದು. ವರದಿಯೊಂದರ ಪ್ರಕಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಿಕ ಅಧಿಕಾರಿ ಜಾಕ್ ಡೋರ್ಸಿ, ತಮ್ಮ ಕಂಪನಿಯ ನೌಕರರು ತಾವು ಬಯಸುವಷ್ಟು ದಿನ ಮನೆಯಿಂದಲೇ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ.
Vergeನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್ ವಕ್ತಾರರು, "ಒಂದು ವೇಳೆ ನಮ್ಮ ಕಂಪನಿಯ ನೌಕರರು ನಿಭಾಯಿಸುವ ಕೆಲಸ ಹಾಗೂ ಪರಿಸ್ಥಿತಿ ಅವರನ್ನು ಮನೆಯಿಂದಲೇ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುತ್ತಿದ್ದರೆ, ಅವರು ಮನೆಯಿಂದಲೇ ಕೆಲಸ ಮಾಡಬಹುದು" ಎಂದು ಹೇಳಿದ್ದಾರೆ.
ಆದರೆ ಇನ್ನೊಂದೆಡೆ, ಯಾವುದೇ ನೌಕರರು ಕಂಪನಿಯ ಕಚೇರಿಯ ಮೂಲಕ ತನ್ನ ಕೆಲಸ ನಿರ್ವಹಿಸಲು ಬಯಸಿದರೆ ಈ ಆಯ್ಕೆ ಕೂಡ ಅವರಿಗೆ ಲಭ್ಯವಿರಲಿದೆ. ಇಂತಹ ನೌಕರರು ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಚೇರಿ ಕೆಲಸಕ್ಕೆ ಮರಳಬಹುದು ಎಂದು ವಕ್ತಾರರು ಇದೆ ವೇಳೆ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ ಕಂಪನಿಯ ಕಚೇರಿಯನ್ನು ತೆರೆಯುವ ನಿರ್ಣಯ ಕಂಪನಿಯೇ ಕೈಗೊಂಡರೂ ಕೂಡ, ಕಚೇರಿ ಕೆಲಸಕ್ಕೆ ಮರಳುವುದು ನೌಕರರಿಗೆ ಬಿಟ್ಟ ವಿಷಯ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.
ಕೆಲ ಅಪವಾದಗಳನ್ನು ಹೊರತುಪಡಿಸಿದರೆ ಕಂಪನಿಯ ಕಛೇರಿಗಳು ಸೆಪ್ಟೆಂಬರ್ ಮೊದಲು ತೆರೆದುಕೊಳ್ಳುವುದಿಲ್ಲ. ಕಂಪನಿಯ ಕಚೇರಿಗಳು ಒಂದು ವೇಳೆ ತೆರೆದುಕೊಂಡರೂ ಕೂಡ ಪರಿಸ್ಥಿತಿಗಳು ಈ ಮೊದಲಿನಂತೆ ಇರುವುದಿಲ್ಲ. ನೌಕರರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು ಟ್ವಿಟ್ಟರ್ ಹೇಳಿದೆ.
ಇದೇ ವೇಳೆ ವರ್ಷ 2020ರಲ್ಲಿ ಕಂಪನಿ ಯಾವುದೇ ರೀತಿಯ ಭೌತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಜೊತೆಗೆ ಕೆಲ ಅಪವಾದಗಳನ್ನು ಹೊರತುಪಡಿಸಿ ಸೆಪ್ಟೆಂಬರ್ ಮೊದಲು ಕಂಪನಿ ತನ್ನ ನೌಕರರ ವಿದೇಶ ಯಾತ್ರೆಗಳ ಮೇಲೆ ನಿರ್ಬಂಧ ವಿಧಿಸಿದೆ ಎಂದು ಕಂಪನಿ ಹೇಳಿದೆ.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ವೈರಸ್ ವಿರುದ್ಧ ಹೋರಾಟ ನಡೆಸಲು ಟ್ವಿಟ್ಟರ್ ಮುಖ್ಯಸ್ಥ ಜಾಕ್ ಡೋರ್ಸಿ ಅತಿ ಹೆಚ್ಚು ಕೊಡುಗೆಯನ್ನು ನೀಡಿರುವುದು ಇಲ್ಲಿ ಉಲ್ಲೇಖನೀಯ. ಜಾಕ್ ತಮ್ಮ ಆದಾಯದ ಒಟ್ಟು ಶೇ.25ರಷ್ಟನ್ನು ಈ ಕಾರ್ಯಕ್ಕೆ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ.