ದೆಹಲಿ / ಇಸ್ಲಾಮಾಬಾದ್: ಕಾರ್ತಾರ್‌ಪುರ ಕಾರಿಡಾರ್‌ನ ವಿಧಾನಗಳ ಕುರಿತು ಭಾರತ ಮತ್ತು ಪಾಕಿಸ್ತಾನ ನಡುವೆ ಜುಲೈ 14 ರಂದು ಎರಡನೇ ಸುತ್ತಿನ ಮಾತುಕತೆ ಪಾಕಿಸ್ತಾನದ ವಾಗಾದಲ್ಲಿ ನಡೆಯಲಿದೆ. ಕಳೆದ ವಾರ ಮಾತುಕತೆಗಾಗಿ ಜುಲೈ 11-14ರ ನಡುವೆ ಯಾವುದೇ ದಿನಾಂಕವನ್ನು ನಿಗದಿ ಪಡಿಸುವಂತೆ ನವದೆಹಲಿ ಇಸ್ಲಾಮಾಬಾದ್‌ಗೆ ಪ್ರಸ್ತಾಪಿಸಿತ್ತು. ಈ ವಿಚಾರವಾಗಿ ಎಪ್ರಿಲ್ ಮೊದಲ ವಾರದಲ್ಲೇ ಎರಡನೇ ಸುತ್ತಿನ ಮಾತುಕತೆ ನಡೆಯಬೇಕಿತ್ತು. ಆದರೆ ಕರ್ತಾರ್‌ಪುರ ಕಾರಿಡಾರ್‌ಗೆ ಸಂಬಂಧಿಸಿದ ಸಮಿತಿಯಲ್ಲಿ ಪಾಕಿಸ್ತಾನ ಖಲಿಸ್ತಾನಿ ಅಂಶಗಳನ್ನು ನೇಮಕ ಮಾಡಿದ್ದರಿಂದ ಭಾರತ ಮಾತುಕತೆ ಮುಂದೂಡಲಾಗಿತ್ತು.
ಮುಂಬರುವ ಸಭೆಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಕರಡು ಒಪ್ಪಂದದ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಈ ವೇಳೆ ಕಾರಿಡಾರ್‌ನಲ್ಲಿ ಯಾತ್ರಿಕರ ಸಂಚಾರ, ಜೋಡಣೆ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಮಾರ್ಚ್ 14 ರಂದು ಅತ್ತಾರಿ-ವಾಗಾ ಗಡಿಯಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಯಿತು. ಮೊದಲ ಸುತ್ತಿನ ಮಾತುಕತೆ ವೇಳೆ ಭಾರತವು ಕಾರಿಡಾರ್ ಮೂಲಕ ಭಾರತೀಯ ನಾಗರಿಕರಿಗೆ ಮತ್ತು ಭಾರತೀಯ ವಲಸಿಗರಿಗೆ ಪ್ರತಿದಿನ 5,000 ಜನರಿಗೆ ಅವಕಾಶ ಕಲ್ಪಿಸಬೇಕೆಂದು ಪ್ರಸ್ತಾಪಿಸಿತ್ತು, ಪಾಕಿಸ್ತಾನವು 700 ಜನರಿಗೆ ಮಾತ್ರ ಅವಕಾಶ ನೀಡಬಹುದೆಂದು ಹೇಳಿದೆ. ಅದೂ ಸಹ ಪಾವತಿಸಿದ ಪರವಾನಗಿಯೊಂದಿಗೆ ಗೊತ್ತುಪಡಿಸಿದ ದಿನಗಳಲ್ಲಿ ಮಾತ್ರ ಭಾರತೀಯ ನಾಗರಿಕರಿಗೆ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ. ಭಾರತೀಯ ಪಾಸ್‌ಪೋರ್ಟ್ ಗುರುತಿನ ಪುರಾವೆಯಾಗಲಿದೆ.
ಇದು ಎರಡನೇ ಸುತ್ತಿನ ಅಧಿಕೃತ ಸಭೆಯಾಗಿದ್ದರೂ, ಎರಡೂ ದೇಶಗಳ ಅಧಿಕಾರಿಗಳ ನಡುವೆ ಮೂರು ಸುತ್ತಿನ ತಾಂತ್ರಿಕ ಮಟ್ಟದ ಮಾತುಕತೆ ಈಗಾಗಲೇ ನಡೆದಿದೆ. ಅಂತರಾಷ್ಟ್ರೀಯ ಗಡಿಯಲ್ಲಿರುವ ಗುರುದಾಸ್ಪುರ ಜಿಲ್ಲೆಯಲ್ಲಿ ಕಾರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ನ.22ರಂದು ನಿರ್ಧಾರ ತೆಗೆದುಕೊಂಡಿತ್ತು.
ಭಾರತ ಈಗಾಗಲೇ ಕಾರಿಡಾರ್‌ನ ಶೇಕಡಾ 45 ರಷ್ಟು ಕೆಲಸವನ್ನು ಪೂರ್ಣಗೊಳಿಸಿದೆ ಮತ್ತು 4 ಲೇನ್‌ಗಳ ಹೆದ್ದಾರಿ ಮತ್ತು ಪ್ರಯಾಣಿಕರ ಬಸ್ ಟರ್ಮಿನಲ್ ಅನ್ನು ನಿರ್ಮಿಸುತ್ತಿದೆ.
ನವೆಂಬರ್ನಲ್ಲಿ ಗುರುನಾನಕ್ ದೇವ್ಜಿಯ 550 ನೇ ಜನ್ಮ ದಿನಾಚರಣೆಯ ಒಂದು ತಿಂಗಳು ಮುಂಚಿತವಾಗಿ, ಅಂದರೆ ಅಕ್ಟೋಬರ್ 2019 ರ ಹೊತ್ತಿಗೆ ಸಂಪೂರ್ಣ ಕಾರಿಡಾರ್ ಅನ್ನು ನಿರ್ಮಾಣ ಮಾಡುವಂತೆ ಗಡುವು ನೀಡಲಾಗಿದೆ.