ಕೊಲಂಬೋ: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಮತ್ತೆ ಬಾಂಬ್ ಸ್ಫೋಟದ ಸದ್ದು ಕೇಳಿಬಂದಿದೆ. ಸುದ್ದಿ ಸಂಸ್ಥೆ ಮಾಹಿತಿ ಪ್ರಕಾರ, ಗುರುವಾರ ಬೆಳಿಗ್ಗೆ ಕೊಲೊಂಬೊದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಪುಗೋಡಾ ಎಂಬ ನಗರದಲ್ಲಿ ಸ್ಫೋಟ ಸಂಭವಿಸಿದೆ.
ಕೊಲೊಂಬೊದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಪುಗೋಡಾ ನಗರದಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಿಂದೆ ಇರುವ ಖಾಲಿ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.
ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಿಂದ ಇನ್ನೂ ಚೇತರಿಸಿ ಕೊಳ್ಳದ ಶ್ರಿಲಂಕಾ ಜನತೆ ಮತ್ತೊಮ್ಮೆ ಬಾಂಬ್ ಸ್ಫೋಟ ನಡೆದಿರುವುದನ್ನು ಕಂಡು ತಲ್ಲಣಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದೆಲ್ಲೆಡೆ 'ಹೈ ಅಲರ್ಟ್' ಘೋಷಿಸಲಾಗಿದೆ.
ಬುಧವಾರ, ದಕ್ಷಿಣ ಕೊಲಂಬೊದಲ್ಲಿ ಸಿನಿಮಾ ಮಂದಿರದ ಸಮೀಪ ಬೈಕ್ ವೊಂದರಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಆ ಬೈಕ್ ನಲ್ಲಿ ಯಾವುದೇ ಸ್ಫೋಟಕವನ್ನು ಪಡೆಯಲಿಲ್ಲ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ. ಇನ್ನು ವಾಹನ ನಿಲುಗಡೆ ವೇಳೆ ಚಾಲಕರು ಬೈಕ್ ಮೇಲೆ ತಮ್ಮ ದೂರುವಾಣಿ ಸಂಖ್ಯೆ ಬರೆಯಬೇಕು ಎಂದು ಶ್ರೀಲಂಕಾ ಪೊಲೀಸ್ ನಗರದ ಎಲ್ಲೆಡೆ ಸೂಚಿಸಿದ್ದಾರೆ.
ಭಾನುವಾರ, ಈಸ್ಟರ್ ಸಂದರ್ಭಗಳಲ್ಲಿ ಚರ್ಚುಗಳು ಮತ್ತು ಹೋಟೆಲ್ ಗಳನ್ನೂ ಗುರಿಯಾಗಿಸಿ ನಡೆಸಲಾಗಿರುವ ಸರಣಿ ಬಾಂಬ್ ಸ್ಫೋಟದಲ್ಲಿ 359 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 60 ಜನರನ್ನು ಬಂಧಿಸಲಾಗಿದೆ. ದ್ವೀಪ ರಾಷ್ಟ್ರದಲ್ಲಿ ಸಂಭವಿಸಿದ ಅತ್ಯಂತ ಪ್ರಾಣಾಂತಿಕ ದಾಳಿಯ ಜವಾಬ್ದಾರಿಯನ್ನು ಐಸಿಸ್ ಹೊತ್ತಿದೆ.