Afghanistan Crisis: ತಾಲಿಬಾನ್ ಗುಂಡಿನ ದಾಳಿಗೆ ಮಕ್ಕಳು ಸೇರಿ 17 ಮಂದಿ ಬಲಿ..!

ಪಂಜ್‌ಶೀರ್‌ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಎಂದು ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

Written by - Puttaraj K Alur | Last Updated : Sep 4, 2021, 04:06 PM IST
  • ಪಂಜ್‌ಶಿರ್ ವಶಪಡಿಸಿಕೊಂಡ ಖುಷಿಯಲ್ಲಿ ಕಾಬೂಲ್‌ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ
  • ತಾಲಿಬಾನಿಗಳ ಗುಂಡಿನ ದಾಳಿಗೆ ಮಕ್ಕಳು ಸೇರಿದಂತೆ 17 ಮಂದಿ ಸಾವು, 41ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
  • ಅನಗತ್ಯವಾಗಿ ಗುಂಡು ಹಾರಿಸದಂತೆ ಎಚ್ಚರಿಕೆ ನೀಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್
Afghanistan Crisis: ತಾಲಿಬಾನ್ ಗುಂಡಿನ ದಾಳಿಗೆ ಮಕ್ಕಳು ಸೇರಿ 17 ಮಂದಿ ಬಲಿ..! title=
ತಾಲಿಬಾನ್ ಗುಂಡಿನ ದಾಳಿಗೆ 17 ಮಂದಿ ಸಾವನ್ನಪ್ಪಿದ್ದಾರೆ (Photo Courtesy: @India.com)

ಕಾಬೂಲ್: ತಾಲಿಬಾನ್ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವನ್ನೇ ಕಬ್ಜಾ ಮಾಡಿಕೊಂಡು ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ತಾಲಿಬಾನ್ ನಾಯಕರು ನೂತನ ಸಚಿವ ಸಂಪುಟ ರಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಈ ಮಧ್ಯೆ ತಾವು ಪಂಜ್‌ಶೀರ್‌ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆಯನ್ನು(NRFA) ಸೋಲಿಸಿದ್ದೇವೆ ಎಂದು ಹೇಳಿಕೊಂಡು ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಾಚರಣೆ(Celebratory Firing) ಮಾಡಿದ್ದಾರೆ. ಈ ಸಂಭ್ರಮಾಚರಣೆ ವೇಳೆ ಮಕ್ಕಳು ಸೇರಿದಂತೆ 17 ಮಂದಿ ತಾಲಿಬಾನಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Eastern Economic Forum: 'ಭಾರತ-ರಷ್ಯಾ ಸ್ನೇಹ ಸಂಬಂಧವು ಕಷ್ಟಕರ ಸಂದರ್ಭಲ್ಲಿಯೂ ಗಟ್ಟಿಯಾಗಿದೆ'

‘ಸರ್ವಶಕ್ತನಾದ ಅಲ್ಲಾಹುವಿನ ಕೃಪೆಯಿಂದ ನಾವು ಇಡೀ ಅಫ್ಘಾನಿಸ್ತಾನ(Afghanistan)ವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದೇವೆ. ಪಂಜ್‌ಶಿರ್‌ನಲ್ಲಿ ಸಮಸ್ಯೆ ಸೃಷ್ಟಿಸಿದ್ದವರನ್ನು ಸೋಲಿಸಲಾಗಿದ್ದು, ಈಗ ಅದು ನಮ್ಮ ನಿಯಂತ್ರಣದಲ್ಲಿದೆ’ ಎಂದು ತಾಲಿಬಾನ್ ಕಮಾಂಡರ್ ಒಬ್ಬ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಪಂಜ್‌ಶಿರ್ ವಶಪಡಿಸಿಕೊಂಡ ಖುಷಿಯಲ್ಲಿ ತಾಲಿಬಾನಿಗಳು ಕಾಬೂಲ್‌ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ, ಅವರ ಗುಂಡಿನ ದಾಳಿಯ ಸಂಭ್ರಮಕ್ಕೆ ಮಕ್ಕಳು ಸೇರಿ 17 ಮಂದಿ ಬಲಿಯಾಗಿದ್ದು, 41ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಮಧ್ಯೆ ತಾಲಿಬಾನಿಗಳು ಪಂಜಶೀರ್‌ ಪ್ರಾಂತ್ಯ(Panjshir Province)ವನ್ನು ವಶಪಡಿಸಿಕೊಂಡಿರುವ ಸುದ್ದಿಯನ್ನು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆಯ ನಾಯಕ ಅಹ್ಮದ್ ಮಸೂದ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಪಂಜಶೀರ್ ವಿಜಯದ ಸುದ್ದಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದು ನೂರಕ್ಕೆ ನೂರರಷ್ಟು ಸುಳ್ಳು. ನಮಗೆ ಕಷ್ಟದ ಪರಿಸ್ಥಿತಿ ಎದುರಾಗಿರುವುದು ನಿಜ. ಆದರೆ ನಾವು ಇನ್ನೂ ಸೋಲೊಪ್ಪಿಕೊಂಡಿಲ್ಲ. ತಾಲಿಬಾನಿಗಳು ಯಾವಾಗ ಪಂಜಶೀರ್ ವಶಪಡಿಸಿಕೊಳ್ಳುತ್ತಾರೋ ಅದೇ ನನ್ನ ಕೊನೆಯ ದಿನವಾಗಿರುತ್ತದೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Afghanistan: ತಾಲಿಬಾನ್ ಇಂದು ಹೊಸ ಅಫ್ಘಾನಿಸ್ತಾನ ಸರ್ಕಾರವನ್ನು ಘೋಷಿಸುವ ನಿರೀಕ್ಷೆ

ಮತ್ತೊಂದೆಡೆ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್(Zabiullah Mujahid) ಅವರು, 17 ಜನರು ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾದ ನಂತರ ಅನಗತ್ಯವಾಗಿ ಗುಂಡು ಹಾರಿಸದಂತೆ ಬಂಡುಕೋರರಿಗೆ ಎಚ್ಚರಿಕೆ ನೀಡಿದ್ದಾರೆ. ‘ಗಾಳಿಯಲ್ಲಿ ಗುಂಡು ಹಾರಿಸುವುದನ್ನು ತಪ್ಪಿಸಿ ಮತ್ತು ಅಲ್ಲಾಹುನಿಗೆ ಕೃತಜ್ಞತೆ ಸಲ್ಲಿಸಿ. ಆಯುಧಗಳು ಮತ್ತು ಮದ್ದುಗುಂಡುಗಳು ನಿಮ್ಮ ಕೈಯಲ್ಲಿವೆ, ಅವುಗಳನ್ನು ಹಾಳುಮಾಡುವ ಹಕ್ಕು ಯಾರಿಗೂ ಇಲ್ಲ. ನಿಮ್ಮ ಗುಂಡುಗಳು ನಾಗರಿಕರಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಅನಗತ್ಯವಾಗಿ ಶೂಟ್ ಮಾಡಬೇಡಿ’ ಎಂದು ಮುಜಾಹಿದ್ ತಾಲಿಬಾನಿಗಳಿಗೆ ಆದೇಶ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News