ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?

ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.

Written by - Girish Linganna | Last Updated : Dec 27, 2023, 07:55 AM IST
  • ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ.
  • ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ.
  • ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.
ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ? title=

ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ವಿವಿಧ ಉದ್ದೇಶಗಳಿಗೆ ತೆರಳಿದಾಗ, ಅವರು ಬಾಹ್ಯಾಕಾಶದಲ್ಲಿ ವಿವಿಧ ಚಟುವಟಿಕೆಗಳಾದ ನೀರು ಕುಡಿಯುವುದು, ಕೂದಲು ಸ್ವಚ್ಛಗೊಳಿಸುವುದು, ಅಥವಾ ಉಪಕರಣಗಳನ್ನು ಬಳಸುವುದನ್ನು ಹೇಗೆ ಕೈಗೊಳ್ಳುತ್ತಾರೆ ಎಂಬುದನ್ನು ತೋರಿಸುವ ವೀಡಿಯೋಗಳನ್ನು ಹಂಚಿಕೊಂಡು, ಮಾಹಿತಿ ನೀಡುತ್ತಾರೆ. ಆದರೆ, ಭೂಮಿಯಲ್ಲಿ ಮಾನವರು ಸದಾ ನಡೆಸುವ, ಜೀವನದಲ್ಲಿ ಅತ್ಯಂತ ಮಹತ್ವದ ಚಟುವಟಿಕೆಯೊಂದರ ಕುರಿತು ಸಾಕಷ್ಟು ಅನುಮಾನಗಳಿವೆ. ಅದೆಂದರೆ, ಲೈಂಗಿಕ ಚಟುವಟಿಕೆ.

ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಇಂತಹ ಪ್ರಯೋಗಗಳಿಗೆ ಸೂಕ್ತ ಸ್ಥಳವಾಗಿಲ್ಲ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಒಂದು ಫುಟ್ಬಾಲ್ ಮೈದಾನದಷ್ಟು ದೊಡ್ಡದಾಗಿದ್ದರೂ, ಗಗನಯಾತ್ರಿಗಳು ವಾಸಿಸುವ ಸ್ಥಳ ಸಮಯ ಕಳೆದಂತೆ ಕಡಿಮೆಯಾಗುತ್ತಿದೆ. ಒಂದು ವೇಳೆ ಗಗನಯಾತ್ರಿಗಳು ವೈಜ್ಞಾನಿಕ ಸಂಶೋಧನೆಯ ಸಲುವಾಗಿ ಲೈಂಗಿಕ ಚಟುವಟಿಕೆ ನಡೆಸಲು ಸಿದ್ಧರಾಗಿದ್ದರೂ, ಅಂತಹ ಚಟುವಟಿಕೆಗಳಿಗೆ ಸೂಕ್ತವಾದ ಖಾಸಗಿ ಸ್ಥಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಲ್ಲ.

ಇಲ್ಲಿಯತನಕ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಬಾಹ್ಯಾಕಾಶದಲ್ಲಿ ಸುದೀರ್ಘ ಸಮಯ ಕಳೆಯುವ ಸಂದರ್ಭದಲ್ಲಿ ಗಗನಯಾತ್ರಿಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ. ಆದರೆ, ಖಾಸಗಿ ಮತ್ತು ವಾಣಿಜ್ಯಿಕ ಬಾಹ್ಯಾಕಾಶ ಯೋಜನೆಗಳು ಜಾರಿಗೆ ಬಂದ ಬಳಿಕ, ಈ ಪರಿಸ್ಥಿತಿ ಮುಂದಿನ ಕೆಲ ಕಾಲದಲ್ಲಿ ಬದಲಾಗಬಹುದು. ಅಂದರೆ, ಇಲ್ಲಿಯ ತನಕ ಉತ್ತರ ಕಂಡುಹಿಡಿಯಲು ಸಾಧ್ಯವಾಗದ, ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ವಿಜ್ಞಾನ ಉತ್ತರ ಕಂಡುಕೊಳ್ಳಬೇಕಿದೆ.

ದೇಹದ ದ್ರವಗಳ ನಿರ್ವಹಣೆ: 
ಬಾಹ್ಯಾಕಾಶದಲ್ಲಿ ಖಾಸಗಿ ತಾಣವನ್ನು ವ್ಯವಸ್ಥೆಗೊಳಿಸುವುದರ ಜೊತೆಗೇ ಇರುವ ಆರಂಭಿಕ ಕಾಳಜಿಗಳೆಂದರೆ, ಇಬ್ಬರು ವ್ಯಕ್ತಿಗಳು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲುತ್ತಾ, ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವೇ ಎನ್ನುವುದಾಗಿದೆ. ಮೇಲ್ನೋಟಕ್ಕೆ ಇದು ಅಸಾಧ್ಯವೆಂಬಂತೆ ಕಂಡುಬಂದರೂ, ಮಾನವರು ಎಷ್ಟು ಹೊಂದಿಕೊಳ್ಳಬಲ್ಲ ಲಕ್ಷಣ ಇರುವವರು ಎಂಬುದರ ಆಧಾರದಲ್ಲಿ ಇದು ಅಷ್ಟೊಂದು ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿಲ್ಲ.

ಆದರೂ, ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.

ಇಂದಿನ ತನಕ ಯಾವುದೇ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹಸ್ತಮೈಥುನಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಚರ್ಚಿಸಿಲ್ಲ. ಆದ್ದರಿಂದ ಬಾಹ್ಯಾಕಾಶದ ವಾತಾವರಣದಲ್ಲಿ ಇಂತಹ ದೈಹಿಕ ದ್ರವಗಳ ನಿರ್ವಹಣೆ ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫ್ಲೋರಿಡಾ ಮೂಲದ ಆ್ಯಸ್ಟ್ರೋಸೆಕ್ಸಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಸಂಶೋಧಕಿಯಾಗಿರುವ, ಮಾರಿಯಾ ಸಾಂಟಾಗುಯ್ಡ ಅವರು ಸಂದರ್ಶನವೊಂದರಲ್ಲಿ ಹಸ್ತಮೈಥುನಕ್ಕೆ ಸಂಬಂಧಿಸಿದ ಕೆಲವು ಉಪಕರಣಗಳು ದೈಹಿಕ ದ್ರವವನ್ನು ಸಂಗ್ರಹಿಸಬಲ್ಲವಾಗಿದ್ದು, ಈ ಸಂದರ್ಭಕ್ಕೆ ಅವುಗಳ ಬಳಕೆ ಪೂರಕವಾಗಬಹುದು ಎಂದಿದ್ದಾರೆ. ಆದರೆ ಸಂಗಾತಿಯೊಡನೆ ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಗಗಳು ಬಾಹ್ಯಾಕಾಶದಲ್ಲಿ ನಡೆದಿಲ್ಲ.

ನಮ್ಮ ಗ್ರಹದಾಚೆಗೆ ಜೀವ ವಿಕಾಸ: 
ವಿಜ್ಞಾನವೂ ಸಹ ಲೈಂಗಿಕ ಸಂಪರ್ಕದ ನಂತರ ಏನಾಗುತ್ತದೆ ಎಂಬ ಕುರಿತು ಕುತೂಹಲ ಹೊಂದಿದೆ. ಹಿಂದಿನ ಪ್ರಯೋಗಗಳಲ್ಲಿ ಬಾಹ್ಯಾಕಾಶದಲ್ಲಿ ಇಲಿಗಳನ್ನು ಬಳಸಿ ಫಲಿತಾಂಶಗಳೇನು ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ಆದರೆ ಪ್ರಯಾಣದ ಒತ್ತಡದ ಕಾರಣದಿಂದ ಯಾವುದೆ ಇಲಿ ಗರ್ಭ ಧರಿಸಲು ಸಾಧ್ಯವಾಗಲಿಲ್ಲ.

ಪ್ರಸ್ತುತ ಅರ್ಥೈಸಿಕೊಂಡಿರುವ ಮಾಹಿತಿಗಳ ಅನುಸಾರ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಫಲವತ್ತತೆ ಸಾಧ್ಯವಿದೆ. ಆದರೆ, ಗುರುತ್ವಾಕರ್ಷಣೆಯ ಕೊರತೆಯ ಕಾರಣದಿಂದ ಜೈಗೋಟ್ ಗರ್ಭಕೋಶದಲ್ಲಿ ಅಳವಡಿಕೆಯಾಗುವುದು ಅನುಮಾನಾಸ್ಪದವಾಗಿದೆ. ಅದರೊಡನೆ, ಇಲಿಗಳ ಮೂಲಕ ನಡೆಸಿದ ಪ್ರಯೋಗಗಳಿಂದ ಸೂಕ್ಷ್ಮ ಗುರುತ್ವಾಕರ್ಷಣೆ ಒಳ ಕಿವಿ ಸೇರಿದಂತೆ ವಿವಿಧ ದೇಹದ ಭಾಗಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದು ಬಂದಿದೆ.

ಜೈಗೋಟ್ ಇಂಪ್ಲಾಂಟ್, ಅಥವಾ ಇನ್ನೂ ನಿರ್ದಿಷ್ಟವಾಗಿ ಜೈಗೋಟ್ ಇಂಪ್ಲಾಂಟೇಷನ್ ಎನ್ನುವುದು ಫಲವತ್ತಾದ ಜೈಗೋಟ್ (ಅಂಡಾಣು) ಗರ್ಭಕೋಶದ ಗೋಡೆಗೆ ತನ್ನನ್ನು ತಾನು ಅಳವಡಿಸುತ್ತದೆ. ಇದು ಗರ್ಭಧಾರಣೆಯಲ್ಲಿ ಅತ್ಯಂತ ಮಹತ್ವದ ಹಂತವಾಗಿದ್ದು, ಇಲ್ಲಿ ತಾಯಿಯಿಂದ ಜೈಗೋಟ್ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುತ್ತದೆ. ಇವುಗಳು ಅದು ಬೆಳೆದು, ಭ್ರೂಣವಾಗಿ ರೂಪುಗೊಳ್ಳಲು ಅತ್ಯವಶ್ಯಕವಾಗಿವೆ.

ಸಂಶೋಧಕರ ಪ್ರಕಾರ, ಒಂದು ವೇಳೆ ಮಾನವರು ಇತರ ಗ್ರಹಗಳೆಡೆಗೆ ಪ್ರಯಾಣ ಬೆಳೆಸಬೇಕಾದರೆ, ಬಾಹ್ಯಾಕಾಶದಲ್ಲಿ ಗರ್ಭಧರಿಸುವುದು ಅವಶ್ಯಕವಾಗಿ ಪರಿಣಮಿಸುತ್ತದೆ. ಇದನ್ನು ಸಾಧ್ಯವಾಗಿಸಲು, ಬಾಹ್ಯಾಕಾಶ ನೌಕೆಯಲ್ಲಿ ಕೃತಕ ಗುರುತ್ವಾಕರ್ಷಣಾ ವ್ಯವಸ್ಥೆ ಇರಬೇಕಾಗುತ್ತದೆ. ಯಾಕೆಂದರೆ, ಭ್ರೂಣ ಕೆಲವು ನಿರ್ದಿಷ್ಟ ಸ್ನಾಯುಗಳು ಮತ್ತು ಮೂಳೆಗಳ ಬೆಳವಣಿಗೆಗೆ, ಬಲವರ್ಧನೆಗೆ ಗುರುತ್ವಾಕರ್ಷಣೆಯ ಮೇಲೆ ಅವಲಂಬಿತವಾಗಿರುತ್ತದೆ.

ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಗಳನ್ನು ನಡೆಸುವುದರಲ್ಲಿ ಇರುವ ಸಂಕೀರ್ಣತೆಗಳನ್ನು ಗಮನಿಸಿದರೆ, ಇದಕ್ಕೆ ಪರ್ಯಾಯ ಉಪಾಯ ಎಂಬಂತೆ ಘನೀಕೃತ ಸಂತಾನೋತ್ಪತ್ತಿ ಜೀವಕೋಶಗಳನ್ನು (ಅಂಡಾಣು ಮತ್ತು ವೀರ್ಯಾಣು) ಬೇರೆ ಗ್ರಹಕ್ಕೆ ಕಳುಹಿಸಬಹುದು. ಈ ವಿಧಾನ ಬಾಹ್ಯಾಕಾಶದಲ್ಲಿ ದೈಹಿಕ ಲೈಂಗಿಕ ಚಟುವಟಿಕೆ ನಡೆಸುವ ಕಷ್ಟಗಳನ್ನು ತಪ್ಪಿಸುತ್ತದೆ. ಅದರೊಡನೆ, ಈ ಕೋಶಗಳನ್ನು ಘನೀಕರಿಸಿ ಸಾಗಿಸುವ ಮೂಲಕ ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸುತ್ತದೆ. ಆ ಮೂಲಕ ಪ್ರಯಾಣದ ಸಂದರ್ಭದಲ್ಲಿ ಈ ಕೋಶಗಳನ್ನು ಅಪಾಯಕಾರಿ ಕಾಸ್ಮಿಕ್ ವಿಕಿರಣಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಇದರಿಂದ ಭೂಮಿಯಿಂದ ಹೊರಗಡೆ ಜನಿಸುವ, ಭವಿಷ್ಯದ ಮಾನವ ಪೀಳಿಗೆಗಳ ಅನುವಂಶಿಕ ಸಮಗ್ರತೆ ಮತ್ತು ಆರೋಗ್ಯ ರಕ್ಷಿಸಲು ಸಾಧ್ಯವಾಗುತ್ತದೆ.

ಮಾನವರು ಭೂಮಿಯಿಂದ ಇನ್ನೊಂದು ಗ್ರಹಕ್ಕೆ ತೆರಳಿ, ಅಲ್ಲಿ ನೆಲೆಸಲು ಹಲವಾರು ಸವಾಲುಗಳನ್ನು ಪರಿಹರಿಸಬೇಕಾಗುತ್ತದೆ. ಅದು ರಾಕೆಟ್ ನಿರ್ಮಿಸಿ, ಅದನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸುವುದು ಎನ್ನುವಷ್ಟು ಸರಳವಾದ ಪ್ರಕ್ರಿಯೆಯಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News