WATCH: ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡ ಭಾಷಣ

Canada MP Chandra Arya: ಕೆನಡಾ ಸಂಸತ್ತಿನಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ ಕನ್ನಡದಲ್ಲಿ ಭಾಷಣ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ. 

Written by - Chetana Devarmani | Last Updated : May 20, 2022, 12:53 PM IST
  • ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡ ಭಾಷಣ
  • ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ
  • ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್
WATCH: ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡ ಭಾಷಣ  title=
ಸಂಸದ ಚಂದ್ರ ಆರ್ಯ

Canada MP Chandra Arya: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. "ನಾನು ಕೆನಡಾದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ (ಪ್ರಥಮ ಭಾಷೆ) ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಪ್ರಪಂಚದ ಯಾವುದೇ ಸಂಸತ್ತಿನಲ್ಲಿ ಕನ್ನಡವನ್ನು ಮಾತನಾಡುವುದು ಇದೇ ಮೊದಲು" ಎಂದು ಕೆನಡಾ ಸಂಸದ ಚಂದ್ರ ಆರ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Akash Vukoti: ಪಟಪಟ ಇಂಗ್ಲೀಷ್‌ ಮಾತಾಡೋ ಈ ಪುಟ್ಟ ಬಾಲಕನ ಜ್ಞಾನ ನೋಡಿದ್ರೆ ಬೆರಗಾಗೋದು ಗ್ಯಾರಂಟಿ

ಚಂದ್ರ ಆರ್ಯ ಅವರು ಕುವೆಂಪು ಅವರ ಕವಿತೆಯೊಂದಿಗೆ ತಮ್ಮ ಭಾಷಣವನ್ನು ಕೊನೆಗೊಳಿಸಿದರು. ಅದನ್ನು ಡಾ.ರಾಜ್‌ಕುಮಾರ್ ಅವರು ಹಾಡಿರುವುದನ್ನು, ತಮ್ಮ ಮಾತಿನಲ್ಲಿ ನೆನಪಿಸಿಕೊಂಡ ಚಂದ್ರು ಆರ್ಯ, "ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು" ಅಂದರೆ ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ಕನ್ನಡಿಗನಾಗು ಎಂದು ಹೇಳಿದ್ದಾರೆ.

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ಚಂದ್ರ ಆರ್ಯ ಅವರನ್ನು ಅಭಿನಂದಿಸಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಭಾರತ ಮತ್ತು ಕರ್ನಾಟಕವನ್ನು ಹೆಮ್ಮೆಪಡುವಂತೆ ಮಾಡಿದ ಚಂದ್ರ ಆರ್ಯ ಅವರನ್ನು ಅಭಿನಂದಿಸಿದ್ದಾರೆ. ಕರ್ನಾಟಕದ ತುಮಕೂರಿನ ಮಗನಿಗೆ ವಂದನೆಗಳು ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ತಮ್ಮ ಕನ್ನಡ ಭಾಷಣದಲ್ಲಿ, ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿಗೆ ಸೇರಿದವರು ಎಂದು ಸಂಕ್ಷಿಪ್ತವಾಗಿ ಪರಿಚಯಿಸಿಕೊಂಡರು.

ನೇಪಿಯನ್ ಪ್ರತಿನಿಧಿಸುವ ಚಂದ್ರ ಆರ್ಯ ಅವರು 2015 ರಲ್ಲಿ ಮೊದಲ ಬಾರಿಗೆ ಕೆನಡಾದ ಸಂಸತ್ತಿಗೆ ಆಯ್ಕೆಯಾದರು ಮತ್ತು ನಂತರ 2019 ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು.

ಇದನ್ನೂ ಓದಿ: ಮಲೇಶಿಯಾದಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡತಿ ʼಸಾನ್ವಿ ದೇಸಾಯಿʼ

ಮಾಜಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಕೆ ಗೋವಿಂದ ಅಯ್ಯರ್ ಅವರ ಪುತ್ರ, ಚಂದ್ರ ಆರ್ಯ ಅವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಓದಿದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದರು. ಅವರು ಕತಾರ್‌ಗೆ ತೆರಳುವ ಮೊದಲು ದೆಹಲಿಯಲ್ಲಿ ಡಿಆರ್‌ಡಿಒ ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕೆಲಸ ಮಾಡಿದ್ದರು. ಪತ್ನಿ ಕೆಲಸಕ್ಕಾಗಿ ಕೆನಡಾಗೆ ತೆರಳಿದ ಕಾರಣ ಕತಾರ್‌ನಿಂದ, ಚಂದ್ರ ಆರ್ಯ ಕೆನಡಾಕ್ಕೆ ತೆರಳಿದರು. ಅಲ್ಲಿ ಅವರು ಪೂರ್ಣ ಪ್ರಮಾಣದ ರಾಜಕೀಯ ಜೀವನ ಆರಂಭಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News