ಸೂರತ್: ಆಗಸ್ಟ್ 26ರಂದು ಎಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಅದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ರಾಖಿ ಆರಾಟ ಜೋರಾಗಿದ್ದು, ಸಹೋದರಿಯರು ರಾಖಿ ಖರೀದಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೆ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಭಾವಚಿತ್ರವಿರುವ ಚಿನ್ನದ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಅಷ್ಟಕ್ಕೂ ಈ ಗಣ್ಯರ ರಾಖಿ ವಿಶಿಷ್ಟತೆ ಏನು ಗೊತ್ತೇ? ಈ ರಾಖಿಗಳನ್ನು 22 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು ಇದರ ಬೆಲೆ ಬರೋಬ್ಬರಿ 50 ಸಾವಿರದಿಂದ 70 ಸಾವಿರ ರೂ.ಗಳು! ಈ ವಿಶಿಷ್ಟ ರಾಖಿಗಳನ್ನು ಗುಜರಾತ್ ರಾಜ್ಯದ ಡೈಮೆಂಡ್ ನಗರ ಸೂರತ್'ನಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹಾಟ್ ಕೇಕ್ ರೀತಿ ಖಾಲಿಯಾಗುತ್ತಿದೆ.
ಚಿನ್ನದ ಸ್ವೀಟ್ ತಿಂದಿದ್ದೀರಾ? ಇದರ ಬೆಲೆ ಕೆ.ಜಿ.ಗೆ ಕೇವಲ 9 ಸಾವಿರ ರೂ!
"ಈಗಾಗಲೇ 50 ರಾಖಿಗಳಲ್ಲಿ 47 ರಾಖಿಗಳು ಮಾರಾಟವಾಗಿದ್ದು, ಹಲವರು ಆರ್ಡರ್ ನೀಡಿ ಹೋಗಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮತ್ತು ಉತ್ತರ ಪ್ರದೇಶ ಸಿಎಂ ದೇಶದ ಅಭಿವೃದ್ಧಿಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವು ವಿಶ್ವಮಟ್ಟದಲ್ಲಿ ಜನರಿಗೆ ಸ್ಫೂರ್ತಿದಾಯಕವಾಗಿದೆ" ಎಂದು ಚಿನ್ನದ ರಾಖಿ ತಯಾರಿ ಉದ್ದೇಶವನ್ನು ಆಭರಣ ಅಂಗಡಿ ಮಾಲೀಕ ಮಿಲನ್ ತಿಳಿಸಿದ್ದಾರೆ..
ಇದೇ ಸಂದರ್ಭದಲ್ಲಿ ಮೋದಿ ರಾಖಿ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಹಕಿ ಶ್ರದ್ಧಾ ಷಾ, "ಪ್ರಧಾನಿ ಮೋದಿಯವರ ಭಾವಚಿತ್ರವಿರುವ ರಾಖಿಯನ್ನು ಖರೀದಿ ಮಾಡಿದ್ದೇನೆ. ಸಹೋದರನಿಗೆ ರಾಖಿ ಕಟ್ಟಿ ನರೇಂದ್ರ ಮೋದಿಯವರಂತೆ ಪ್ರಸಿದ್ಧರಾಗಿ ಎಂದು ಹಾರೈಸಬೇಕೆಂದಿದ್ದೇನೆ" ಎಂದಿದ್ದಾರೆ.