Cabinet Expansion: ಏ.30ರಂದು ದೆಹಲಿಗೆ ಸಿಎಂ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ

ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಪಕ್ಷದ ವರಿಷ್ಠರು ಕರೆದಾಗ ತಾವು ದೆಹಲಿಗೆ ಹೋಗುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ. ಹೀಗಾಗಿ ಈ ದೆಹಲಿ ಭೇಟಿ ವೇಳೆ ಸಂಪುಟ ಬಗ್ಗೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Written by - Zee Kannada News Desk | Last Updated : Apr 23, 2022, 08:08 AM IST
  • ಏಪ್ರಿಲ್ 30ಕ್ಕೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
  • ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸುವ ಸಾಧ‍್ಯತೆ
  • ಹಳಬರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ನಡೆದಿದ್ಯಾ ಮಾಸ್ಟರ್ ಪ್ಲಾನ್?
Cabinet Expansion: ಏ.30ರಂದು ದೆಹಲಿಗೆ ಸಿಎಂ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ  title=
ಸಂಪುಟ ವಿಸ್ತರಣೆ ಬಗ್ಗೆ ಶುರುವಾಯ್ತು ಗುಸುಗುಸು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ತಿಂಗಳ ಅಂತ್ಯದ ವೇಳೆಗೆ ದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವುದಿಲ್ಲ, ಬೊಮ್ಮಾಯಿಯವರೇ 2023ರ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏಪ್ರಿಲ್ 30ರಂದು ದೆಹಲಿಯಲ್ಲಿ ಜನರಿಗೆ ತ್ವರಿತ ನ್ಯಾಯ ಒದಗಿಸುವ ಪ್ರಯತ್ನಗಳ ಪರಿಣಾಮಕಾರಿ ಸಮನ್ವಯಕ್ಕಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಸಿಎಂ ಬೊಮ್ಮಾಯಿಯವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ರೂವಾರಿ: ಬಿಜೆಪಿ ಆರೋಪ

ಈ ಭೇಟಿಯ ವೇಳೆ ಬೊಮ್ಮಾಯಿಯವರು ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಸಂಪುಟ ಬದಲಾವಣೆ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಕಾರ್ಯನಿರ್ವಹಣೆ ಮಾಡದ ಕೆಲವರು ಮತ್ತು ಯಾರ ವಿರುದ್ಧ ಆರೋಪಗಳಿವೆಯೋ ಅವರನ್ನು ಕೈಬಿಡುವ ಸಾಧ್ಯತೆಯಿದೆ. ಇನ್ನು 10 ತಿಂಗಳಷ್ಟೇ ಬಾಕಿಯಿರುವ ಚುನಾವಣೆಗೆ ಪಕ್ಷ ಸಂಘಟಿಸಲು ಸಂಪುಟದಲ್ಲಿರುವ ಕೆಲ ನಾಯಕರನ್ನು ಕಣಕ್ಕಿಳಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಪಕ್ಷದ ವರಿಷ್ಠರು ಕರೆದಾಗ ತಾವು ದೆಹಲಿಗೆ ಹೋಗುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ. ಹೀಗಾಗಿ ಈ ದೆಹಲಿ ಭೇಟಿ ವೇಳೆ ಸಂಪುಟ ಬಗ್ಗೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಇದೇ ವೇಳೆ ಏಪ್ರಿಲ್ 29ರಂದು ಮೊದಲ ಸೆಮಿಕಂಡಕ್ಟರ್ ಸಮ್ಮೇಳನವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಭೇಟಿ ವೇಳೆ ಅವರು ರಾಜ್ಯ ನಾಯಕರೊಂದಿಗೆ ಸ್ವಲ್ಪ ಸಮಯ ಕಳೆಯಲಿದ್ದಾರೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ ನಂತರ 5 ಸಚಿವ ಸ್ಥಾನಗಳು ಖಾಲಿ ಇವೆ. ಕೆಲ ಖಾತೆಗಳು ದೀರ್ಘಾವಧಿಯಿಂದ ಖಾಲಿ ಉಳಿದಿವೆ. ಸ್ಥಾನಗಳನ್ನು ಭರ್ತಿ ಮಾಡುವಲ್ಲಿನ ಅತಿಯಾದ ವಿಳಂಬದ ಬಗ್ಗೆ ಸಚಿವಾಕಾಂಕ್ಷಿಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ, ಬಿಜೆಪಿ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್: ಎಚ್.ಡಿ.ಕುಮಾರಸ್ವಾಮಿ

ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು, ಕೇಂದ್ರ ನಾಯಕತ್ವದ ಆಹ್ವಾನದ ಮೇರೆಗೆ ದೆಹಲಿಗೆ ಭೇಟಿ ನೀಡುವುದಾಗಿ ಬೊಮ್ಮಾಯಿ ಖಚಿತಪಡಿಸಿದ್ದಾರೆ.

ಅನೇಕ ದಿನಗಳಿಂದ ಸದ್ದು ಮಾಡುತ್ತಿರುವ ಕರ್ನಾಟಕದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಹೊಸ ಮುಖಗಳು, ಭವಿಷ್ಯದ ನಾಯಕರಾಗಬಲ್ಲವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಹೈಕಮಾಂಡ್‌ ದೂರದೃಷ್ಟಿಯ ಸೂತ್ರ ಅಳವಡಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಮೂಡಿದೆ. ಕೆಲ ಹಿರಿಯರನ್ನು ಕೈಬಿಡುವ ಸಾಧ್ಯತೆ ಬಗ್ಗೆ ಈಗಾಗಲೇ ಗುಸುಗುಸು ಶುರುವಾಗಿದ್ದು, ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News