ಬೆಂಗಳೂರು: ನಾನು ಯಾರ ಹಂಗಿನಲ್ಲೂ ಇಲ್ಲ, ಭಿಕ್ಷೆ ಬೇಡಿ ನಾನು ಅಧಿಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ..
ವಿಧಾನಸೌಧದಲ್ಲಿ ಸೋಮವಾರ ನಡೆದ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಹಣ ಎಲ್ಲಿಂದ ತರುತ್ತಾರಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಈ ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಲು ಸಾಲಮನ್ನಾ ಮಾಡುವ ಬಗ್ಗೆ ಮುಂದಾಗಿದ್ದೇನೆಯೇ ಹೊರತು ನನಗೆ ಇದರಿಂದ ಯಾವುದೇ ಕಮಿಷನ್ ಬರುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಯನ್ನು ಯಾರಿಂದಲೂ ಭಿಕ್ಷೆ ಬೇಡಿ ಪಡೆದದ್ದಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಬಜೆಟ್ ಮಂಡನೆ ಮಾಡ್ತಿನೋ, ಇಲ್ವೋ ಗೊತ್ತಿಲ್ಲ: ಸಿಎಂ
ಮುಂದುವರೆದು ಮಾತನಾಡಿದ ಅವರು, ರಾಜ್ಯದ ರೈತರ ಹಿತದೃಷ್ಟಿಯಿಂದ ಸಾಲಮನ್ನಾ ಮಾಡಲು ಮುಂದಾಗಿದ್ದೇನೆ. ನಮ್ಮ ಸರ್ಕಾರದಿಂದ ಜನತೆಗೆ ಒಂದಿಷ್ಟು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. "ನಾನು ಸ್ಮೂತ್ ಗೋಯಿಂಗ್ ಇದ್ದೇನೆ. ನಾನು ಇತರರಂತೆ ದುರಹಂಕಾರದ ಗಡಸು ಮಾತು ಹೇಳಿ ಅಧಿಕಾರಿಗಳಿಂದ ಕೆಲಸ ಮಾಡಿಸುವವನಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಒಂದೊಂದು ಸರ್ಕಾರ ಬಂದಾಗ ಒಂದೊಂದು ನೀತಿ ತರುತ್ತಾರೆ. ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಇರೋತ್ತೋ ಇಲ್ಲವೋ ಎಂಬುದಾಗಿ ದೂರುತ್ತಿದ್ದಾರೆ. ಇಂತಹ ಮಾತುಗಳು ಖಂಡಿತಾ ಬೇಡ. ಈ ರೀತಿ ಮಾತನಾಡಿದವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಾನು ರಾಹುಲ್ ಗಾಂಧಿ ಅವರ ಹಂಗಿನಲ್ಲಿದ್ದೇನೆ ಎಂದು ಬಹಳ ಸಮಾಧಾನವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಇಂದು ನಾನು ಯಾರ ಹಂಗಿನಲ್ಲಿಯೂ ಇಲ್ಲ ಎಂದು ಬಹಳ ಕಟುವಾಗಿ ಉತ್ತರಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.