CWG 2018: ಭಾರತಕ್ಕೆ 3ನೇ ಚಿನ್ನ ಗೆದ್ದ ಸತೀಶ್ ಶಿವಲಿಂಗಂ

ಪುರುಷರ 77 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್'ನಲ್ಲಿ ಸತೀಶ್​ ಕುಮಾರ್ ಶಿವಲಿಂಗಂ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 

Last Updated : Apr 7, 2018, 10:03 AM IST
CWG 2018: ಭಾರತಕ್ಕೆ 3ನೇ ಚಿನ್ನ ಗೆದ್ದ ಸತೀಶ್ ಶಿವಲಿಂಗಂ title=
Pic : Twitter

ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್​​​​​ನಲ್ಲಿ ನಡೆಯುತ್ತಿರುವ 21ನೇ ಕಾಮನ್‌ ವೇಲ್ತ್‌ ಗೇಮ್ಸ್​ನ ಮೂರನೇ ದಿನವೂ ಭಾರತಕ್ಕೆ ಮೂರನೇ ಚಿನ್ನ ಲಭಿಸಿದೆ. ಪುರುಷರ 77 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್'ನಲ್ಲಿ ಸತೀಶ್​ ಕುಮಾರ್ ಶಿವಲಿಂಗಂ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 

ಸತೀಶ್ ಕುಮಾರ್ ಅವರು ಒಟ್ಟು 317 ಕೆ.ಜಿ. ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ನ ಜಾಕ್ ಒಲಿವರ್ ತೀವ್ರ ಪೈಪೋಟಿ ನೀಡಿದರು. ಆದರೆ ಜಾಕ್ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಆಸ್ಟ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ ಒಟ್ಟು 305 ಕೆ.ಜಿ. ತೂಕ ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. 

ತಮಿಳುನಾಡಿನ ವೆಲ್ಲೂರು ಮೂಲದ 25 ವರ್ಷದ ಸತೀಶ್​ ಕುಮಾರ್ ಶಿವಲಿಂಗಂ ಈ ಹಿಂದೆ ಗ್ಲಾಸ್ಗೋದಲ್ಲಿ ನಡೆದ 20ನೇ ಕಾಮನ್​ವೆಲ್ತ್​ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ಬಾರಿಯ ವಿಶೇಷ ಎಂದರೆ, 2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮುಉರು ಚಿನ್ನದ ಪದಕ ಬಂದಿದ್ದು, ಎಲ್ಲವೂ ವೇಟ್ ಲಿಫ್ಟಿಂಗ್ ನಲ್ಲಿ ಬಂದಿವೆ. 

ಕಾಮನ್ ವೆಲ್ತ್ ಕ್ರೀಡಾಕೂಟದ ಮೊದಲ ದಿನ ವೇಟ್ ಲಿಫ್ಟಿಂಗ್'ನಲ್ಲಿ ಪುರುಷರ 56ಕೆ.ಜಿ. ವಿಭಾಗದಲ್ಲಿ ಗುರುರಾಜ್ ಬೆಳ್ಳಿ ಪದಕ, ಮಹಿಳೆಯರ 48ಕೆ.ಜಿ.ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರು. 2 ನೇ ದಿನ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಸಂಜಿತಾ ಚಾನು ಚಿನ್ನದ ಪದಕ ಹಾಗೂ ಪುರುಷರ 69ಕೆ.ಜಿ.ವಿಭಾಗದಲ್ಲಿ ದೀಪಕ್ ಲಾಥರ್ ಕಂಚಿನ ಪದಕವನ್ನು ಗಳಿಸಿದ್ದರು. 

ಇಂದು ಸತೀಶ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಒಟ್ಟು 5 ಪದಕಗಳು ಒಲಿದಂತಾಗಿದ್ದು, ಪದಕಗಳನ್ನು ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಮವಾಗಿ 41 ಮತ್ತು 23 ಪದಕಗಳನ್ನು ಗಳಿಸುವುದರೊಂದಿಗೆ ಮುನ್ನಡೆ ಸಾಧಿಸಿವೆ.

Trending News