ಕೇರಳದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ; ಹಿಂಸಾಚಾರಕ್ಕೆ ತಿರುಗಿದ ಎಸ್ಎಫ್ಐ ಕಾರ್ಯಕರ್ತರ ಪ್ರತಿಭಟನೆ

ಕೇರಳದ ಪಂಪಡಿ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರು ಶಾಲೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು. 

Last Updated : Apr 1, 2018, 04:26 PM IST
ಕೇರಳದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ; ಹಿಂಸಾಚಾರಕ್ಕೆ ತಿರುಗಿದ ಎಸ್ಎಫ್ಐ ಕಾರ್ಯಕರ್ತರ ಪ್ರತಿಭಟನೆ title=

ಕೊಟ್ಟಾಯಂ: ಕೇರಳದ ಪಂಪಡಿ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರು ಶಾಲೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ಕಟ್ಟಡ, ಕಿಟಕಿಗಳು, ಬೆಂಚು ಮತ್ತು ಮೇಜುಗಳನ್ನು ಕಾರ್ಯಕರ್ತರು ಹಾನಿಗೊಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಲಭೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲಗಳ ಪ್ರಕಾರ, ವಜುರ್ ಮೂಲದ ವಿದ್ಯಾರ್ಥಿಯೋರ್ವ 9ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಅಗತ್ಯವಾದ ಅಂಕಗಳನ್ನು ಪಡೆಯಲು ವಿಫಲನಾದ ಕಾರಣ ಆತನನ್ನು 10ನೇ ತರಗತಿಗೆ ಕಳುಹಿಸಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಮಗ   ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ, ಶಾಲಾ ಆಡಳಿತ ಮಂಡಳಿಯು ತಮ್ಮ ಮಗನಿಗೆ ವರ್ಗಾವಣೆ ಪತ್ರವನ್ನು ನೀಡುವುದಾಗಿಯೂ ಬೆದರಿಕೆ ಹಾಕಿತ್ತು ಎಂದು ಮೃತ ವಿದ್ಯಾರ್ಥಿ ತಂದೆ ಆರೋಪಿಸಿದ್ದಾರೆ.  

ಆದರೆ, ಈ ಆರೋಪಗಳನ್ನು ಶಾಲಾ ಆಡಳಿತ ಮಂಡಳಿ ತಳ್ಳಿ ಹಾಕಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶಾಲಾ ಆಡಳಿತ ಮಂಡಳಿ ಪ್ರತಿನಿಧಿಯೊಬ್ಬರು, ಯಾರೊಬ್ಬರೂ ಆ ವಿದ್ಯಾರ್ಥಿಗೆ ಮುಂದಿನ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿಲ್ಲ ಎಂದು ಹೇಳಿದ್ದಾರೆ. 

ಆದಾಗ್ಯೂ, ನಿಯಮ 9 ರ ಪ್ರಕಾರ 9ನೇ ತರಗತಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಅಂಕಗಳಿಸುವಂತಹ ವಿದ್ಯಾರ್ಥಿಗಳನ್ನು 10ನೇ ತರಗತಿಗೆ ಪರಿಗಣಿಸುವುದಿಲ್ಲ ಎಂಬುದನ್ನು ಶಾಲಾ ಮಂಡಳಿ ಒಪ್ಪಿಕೊಂಡಿದೆ. 

ಈ ಪ್ರಕರಣ ಸಂಬಂಧ ವಿದ್ಯಾರ್ಥಿಯ ಪೋಷಕರು ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ  ವಿಶೇಷ ತನಿಖೆಗೆ ಆಗ್ರಹಿಸಿದೆ. 

Trending News