ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬ್ಯಾಂಕ್'ಗಳಿಂದ ಸಾಲ ಪಡೆದು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 50 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಡೆಯುವ ಉದ್ಯಮಿಗಳ ಪಾಸ್ ಪೋರ್ಟ್ ವಿವರಗಳನ್ನು ಕಡ್ಡಾಯವಾಗಿ ಪಡೆಯುವಂತೆ ಕೇಂದ್ರ ಸರ್ಕಾರ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ಯಾವುದೇ ಬ್ಯಾಂಕ್’ನಿಂದ 50 ಕೋಟಿಗಿಂತಲೂ ಅಧಿಕ ಸಾಲವನ್ನು ಪಡೆದುಕೊಳ್ಳಲು ಪಾಸ್ಪೋರ್ಟ್ ಕಡ್ಡಾಯ ಮಾಡಲಾಗಿದೆ. ಪಾಸ್ಪೋರ್ಟ್’ನಲ್ಲಿ ವ್ಯಕ್ತಿಯ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಇರುವುದರಿಂದ ಸಾಲವನ್ನು ಮರುಪಾವತಿ ಮಾಡುವಲ್ಲಿ ಸಮಸ್ಯೆಯಾದಾಗ ತ್ವರಿತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಅವರು ದೇಶದಿಂದ ಪಲಾಯನವಾಗುವುದನ್ನು ತಡೆಯಬಹುದು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬ್ಯಾಂಕ್ಗೆ ವಂಚಿಸಿ ವಿದೇಶಕ್ಕೆ ಹಾರಿ ಹೋಗುವ ಉದ್ಯಮಿಗಳಾದ ನೀರವ್ ಮೋದಿ ಹಾಗೂ ವಿಜಯ ಮಲ್ಯರಂತಹ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಬ್ಯಾಂಕುಗಳಿಗೆ 50 ಕೋಟಿ ರೂ.ಗಳಿಗಿಂತ ಹೆಚ್ಚು ಸಾಲ ಪಡೆದವರ ಪಾಸ್ಪೋರ್ಟ್ ವಿವರಗಳನ್ನು 45 ದಿನಗಳೊಳಗೆ ಪಡೆಯಲು ಬ್ಯಾಂಕ್'ಗಳಿಗೆ ಗಡುವು ನೀಡಿದೆ.