ನವದೆಹಲಿ : ಬಿಜೆಪಿ ಅವರು ರಾಜ್ಯದಲ್ಲಿ ಅನಾವಶ್ಯಕವಾಗಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಆರ್.ಧ್ರುವ ನಾರಾಯಣ್ ಆರೋಪಿಸಿದರು.
ಇಂದಿಲ್ಲಿ ಸಂಸದ ಮುದ್ದಹನುಮೇಗೌಡ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆ ಇದೆ. ಎನ್.ಸಿ.ಆರ್.ಬಿ ವರದಿ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಪರಾಧ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸುಸ್ಥಿತಿಯಲ್ಲಿದ್ದು, ಸೌಹಾರ್ಧತೆ ಇದೆ. ಆದರೆ ಕರಾವಳಿಯಲ್ಲಿ ನಡೆಯುವ ಗುಂಪು ಘರ್ಷಣೆಯನ್ನೇ ಬಿಜೆಪಿ ಅವರು ಹಿಂದೂಗಳ ಕೊಲೆ ಎಂದು ಹೇಳಿ ಕೋಮು ಪ್ರಚೋದನೆಗೆ ಎಡೆ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರಲ್ಲದೆ, ರಾಜ್ಯದಲ್ಲಿ ಸರ್ಕಾರದ ಆಡಳಿತದಲ್ಲಿ ವೈಫಲ್ಯವಿದ್ದರೆ ಅದನ್ನು ಗುರುತಿಸಿ ಎತ್ತಿಹಿಡಿಯಿರಿ. ಆದರೆ ಶಾಂತಿಯನ್ನು ಕದಡಬೇಡಿ ಎಂದು ಬಿಜೆಪಿಗೆ ಕಿವಿಮಾತು ಹೇಳಿದರು.
ಇನ್ನು, ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ, ಒಡೆದು ಆಳುವ ನೀತಿ ನಿಮ್ಮದು ಎಂದು ಹೇಳುವ ಮೂಲಕ ಅವಮಾನಿಸಿದ್ದು, ಈ ಹೇಳಿಕೆ ಸರಿಯಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿಜೆಪಿಗೆ ಇಲ್ಲ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಸಂಸದ ಮುದ್ದಹನುಮೇಗೌಡ, ನಾಲ್ಕು ವರ್ಷದಿಂದ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರಿಗೆ ದೇಶದ ಅಭಿವೃದ್ಧಿಗಿಂತ ವಿರೋಧ ಪಕ್ಷಗಳನ್ನು ಟೀಕೆ ಮಾಡಿ ಚುನಾವಣೆ ಗೆಲ್ಲುವುದೇ ಮುಖ್ಯ ಗುರಿಯಾಗಿದೆ. ಭಾಷಣದಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವ ಕೊಡುಗೆಗಳನ್ನು ನೀಡಲಾಗಿದೆ ಎಂಬುದನ್ನು ಹೇಳುವುದು ಬಿಟ್ಟು, ರಾಷ್ಟ್ರಪತಿ ಅವರ ಭಾಷಣದಲ್ಲಿ ರೈತರ ಬಗ್ಗೆ ಭಾಷಣ ಮಾಡಿಸುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಅವರು ಹರಿಹಾಯ್ದರು.