ಬೆಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರುವರಿ 10ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಹೈದರಾಬಾದ್-ಕರ್ನಾಟಕ ಭಾಗದ ರಾಯಚೂರು, ಬೀದರ್, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅವರು ಭೇಟಿ ನೀಡಲಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ರಾಹುಲ್ ಗಾಂಧಿ ಅವರು ತಮ್ಮ ರಾಜ್ಯ ಪ್ರವಾಸದಲ್ಲಿ ಸಾರ್ವಜನಿಕ ಸಭೆಗಳನ್ನು ಹೊರತುಪಡಿಸಿ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಹುಲಿಗಮ್ಮ ದೇವಸ್ಥಾನ, ಯಾದಗಿರಿ ಜಿಲ್ಲೆಯ ಗವಿ ಸಿದ್ಧೇಶ್ವರ ಮಠ, ಗುಲ್ಬರ್ಗಾದ ಖ್ವಾಜಾ ಬಂದೆ ನವಾಜ್ ದರ್ಗಾ ಮತ್ತು ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರ ಒಕ್ಕೂಟ ಮತ್ತು ವೃತ್ತಿಪರ ಮತ್ತು ವ್ಯವಹಾರ ಸಮುದಾಯದ ಸದಸ್ಯರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಫೆಬ್ರುವರಿ 10ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ಮಾಡುವ ಮೂಲಕ ರಾಹುಲ್ ಗಾಂಧಿ ಪ್ರವಾಸ ಆರಂಭವಾಗಲಿದೆ. ಫೆಬ್ರವರಿ 12 ರಂದು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹೈದ್ರಾಬಾದ್ ಮೂಲಕ ದೆಹಲಿಗೆ ವಾಪಸ್ ತೆರಳಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಹೈದರಾಬಾದ್-ಕರ್ನಾಟಕ ಪ್ರದೇಶದ 40 ವಿಧಾನಸಭಾ ಸ್ಥಾನಗಳಲ್ಲಿ ಪ್ರಸ್ತುತ ಕಾಂಗ್ರೆಸ್ 23 ಸ್ಥಾನಗಳನ್ನು ಹೊಂದಿದೆ. ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಮಂತ್ರಿ ಕಮರ್ ಉಲ್ ಇಸ್ಲಾಂ ಅವರು ಇದೇ ಭಾಗದವರಾಗಿದ್ದಾರೆ.