ಬೆಂಗಳೂರು: ಕೊರೋನಾ (Covid-19) ಸೋಂಕು ಹರಡುವಿಕೆ ಭಯದಿಂದ ಸಾಮಾಜಿಕ ಅಂತರ ಕಾಯ್ದುಕೊಂಡೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯಿತು.
ಪ್ರತಿವರ್ಷ ಸರ್ಕಾರದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡ ಆಚರಿಸಲಾಗುತ್ತಿದ್ದು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು.
ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Karge), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ಹೆಚ್. ಆಂಜನೇಯ ಕೂಡ ಭಾಗಿಯಾಗಿದ್ದರು. ಎಲ್ಲರೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಒಬ್ಬರಾದ ಮೇಲೆ ಒಬ್ಬರು ಸೋಷಿಯಲ್ ಡಿಸ್ಟೇನ್ಸ್ ಮಾಡುತ್ತಾ ಬಂದು ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಯಡಿಯೂರಪ್ಪ 'ಬನ್ನಿ' ಎಂದು ಆಹ್ವಾನಿಸಿದರು. ಈ ವೇಳೆ ಡಿಸ್ಟೇನ್ಸ್ ಮ್ಯಾಂಟೇನ್ ಮಾಡೋಣ ಎಂದು ದೂರ ದೂರ ದಿಂದಲೇ ವೇದಿಕೆಯತ್ತ ನಡೆದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿದ ಯಡಿಯೂರಪ್ಪ, ಅಂಬೇಡ್ಕರ್ ಅವರ 129 ನೇ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸುತ್ತಿದ್ದೇವೆ. ಅಂಬೇಡ್ಕರ್ ಶ್ರೇಷ್ಠ ಆರ್ಥಿಕ ತಜ್ಞ, ಸಂವಿಧಾನ ತಜ್ಞ ಮತ್ತು ರಾಜಕೀಯ ಚಿಂತಕ. ಜಾತ್ಯಾತೀತ ಭಾರತದ ನಿರ್ಮಾಣ ಅಂಬೇಡ್ಕರ್ ಕನಸ್ಸಾಗಿತ್ತು. ಅಂಬೇಡ್ಕರ್ ಅವರ ಜೀವನ, ಹೋರಾಟ ಯುವ ಜನಾಂಗಕ್ಕೆ ಸ್ಪೂರ್ತಿ ಆಗಬೇಕು. ಅವರ ಕುರಿತು ಮತ್ತಷ್ಟು ಅಧ್ಯಯನ ಆಗಬೇಕು ಎಂದು ಹೇಳಿದರು.
ಅನ್ಯಾಯ, ಅಸಮಾನತೆ, ಶೋಷಣೆಗಳ ವಿರುದ್ದ ಎಲ್ಲಾ ಚಳುವಳಿಗೆ ಅಂಬೇಡ್ಕರ್ ಚಿಂತನೆಗಳೆ ಸ್ಫೂರ್ತಿ. ನಮ್ಮ ಸರ್ಕಾರ ಅಂಬೇಡ್ಕರ್ ಆಶಯ ಕ್ಕೆ ಬದ್ಧವಾಗಿದೆ. ನಮ್ಮ ಸರ್ಕಾರ ಅವರ ತತ್ವ ಆದರ್ಶಗಳ ಹಾದಿಯಲ್ಲಿ ನಡೆಯುವ ದೃಢ ಸಂಕಲ್ಪ ತೊಟ್ಟಿದೆ ಎಂದು ತಿಳಿಸಿದರು.