ನವದೆಹಲಿ: ಗುಜರಾತ್ ಪೊಲೀಸರ ಆಗ್ರಹದ ಮೇರೆಗೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ್ ವಿರುದ್ಧ ಇಂಟರ್ ಪೋಲ್ 'ಬ್ಲೂ ಕಾರ್ನರ್' ನೋಟಿಸ್ ಜಾರಿಗೊಳಿಸಿದೆ. ಕಳೆದ ವರ್ಷ ನಿತ್ಯಾನಂದ ಭಾರತದಿಂದ ಪಲಾಯನಗೈದಿದ್ದಾನೆ. ಆತನ ವಿರುದ್ಧ ಅತ್ಯಾಚಾರ ಮತ್ತು ಅಪಹರಣದ ಹಲವು ಪ್ರಕರಣಗಳು ದಾಖಲಾಗಿವೆ. ನಿತ್ಯಾನಂದನ ವಿರುದ್ಧ 'ಬ್ಲೂ ಕಾರ್ನರ್' ನೋಟಿಸ್ ಜಾರಿಗೊಳಿಸಿರುವ ಇಂಟರ್ ಪೋಲ್, ನಿತ್ಯಾನಂದನ ಕುರಿತು ಹಲವು ದೇಶಗಳಿಂದ ಮಾಹಿತಿ ಕೇಳಿದೆ. ಅಹ್ಮದಾಬಾದ್ DSP(ಗ್ರಾಮೀಣ) ಕೋಟಿ ಕಮಾರಿಯಾ ನಿತ್ಯಾನಂದನ ವಿರುದ್ಧ 'ಬ್ಲೂ ಕಾರ್ನರ್' ನೋಟೀಸ್ ಜಾರಿಯಾಗಿರುವ ಮಾಹಿತಿ ನೀಡಿದ್ದಾರೆ.
ನಿತ್ಯಾನಂದನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಆಶ್ರಮವೊಂದರಿಂದ ಇಬ್ಬರು ಯುವತಿಯರು ಕಾಣೆಯಾದ ಬಳಿಕ ಗುಜರಾತ್ ಪೊಲೀಸರು ನಿತ್ಯಾನಂದನ ವಿರುದ್ಧ FIR ದಾಖಲಿಸಿದ್ದಾರೆ. ತನ್ನ ಆಶ್ರಮದಲ್ಲಿ ಮಕ್ಕಳನ್ನು ಕೂಡಿಹಾಕಿ ಭಕ್ತರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವ ಆರೋಪ ನಿತ್ಯಾನಂದನ ಮೇಲಿದೆ. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ನೇಪಾಳ ಮಾರ್ಗವಾಗಿ ನಿತ್ಯಾನಂದ ಟ್ರಿನಿಡಾಡ್ ಗೆ ಪಲಾಯನಗೈದಿದ್ದಾನೆ ಎನ್ನಲಾಗಿದೆ.
ಇಕ್ವೆಡಾರ್ ಬಳಿ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ಸ್ವತಂತ್ರ ದೇಶ ನಿರ್ಮಿಸಿದ್ದಾನೆ ಎಂದು ಕಳೆದ ತಿಂಗಳು ವರದಿಯಾಗಿದ್ದು, ಹೊಸ ದೇಶಕ್ಕೆ ಆತ 'ಕೈಲಾಸಾ' ಎಂದು ಹೆಸರಿಟ್ಟಿದ್ದಾನೆ ಎನ್ನಲಾಗಿತ್ತು. kailaasa.org ಹೆಸರಿನ ವೆಬ್ ಸೈಟ್ ನಿರ್ಮಿಸಿದ್ದ ನಿತ್ಯಾನಂದನ ವಿಡಿಯೋವೊಂದು ಕೂಡ ಕಳೆದ ತಿಂಗಳು ಭಾರಿ ವೈರಲ್ ಆಗಿದ್ದು, ವಿಡಿಯೋದಲ್ಲಿ ನಿತ್ಯಾನಂದ ಒಂದು ಅಜ್ಞಾತ ಸ್ಥಳದಲ್ಲಿ ಧರ್ಮಪ್ರದೇಶ ನಿರ್ಮಿಸುತ್ತಿರುವುದನ್ನು ತೋರಿಸಲಾಗಿತ್ತು. ಆದೆ, ಇಕ್ವೆಡಾರ್ ಸರ್ಕಾರ ನಿತ್ಯಾನಂದನ ಇರುವಿಕೆಯನ್ನು ಅಲ್ಲಗಳೆದಿತ್ತು.
2010 ನಟಿಯ ಜೊತೆ ಆತನ ರಾಸಲೀಲೆಯ ವಿಡಿಯೋ ಬಹಿರಂಗಗೊಂಡಿತ್ತು
ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಗುಜರಾತ್ ನಿಂದ ಕರ್ನಾಟಕದವರೆಗೆ ಯುವತಿಯರ ಅಪಹರಣ, ಅತ್ಯಾಚಾರದ ಹಲವು ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ನಿತ್ಯಾನಂದ ನಟಿಯ ಜೊತೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಬಹಿರಂಗಗೊಂಡಿತ್ತು, ಈ ವಿಡಿಯೋದಲ್ಲಿ ನಿತ್ಯಾನಂದನನ್ನು ನಟಿಯ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿತ್ತು. ಆದರೆ, ಅದಾದ ಕೆಲ ದಿನಗಳ ನಂತರ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಸೆಪ್ಟೆಂಬರ್ 2018 ರಲ್ಲಿ ಆತನ ಪಾಸ್ಪೋರ್ಟ್ ಎಕ್ಸ್ಪ್ರೆಸ್ ಆಗಿತ್ತು.