ಜೈಪುರ್:ರಾಜಸ್ಥಾನದ ರಾಜಧಾನಿ ಜೈಪುರ್ ನ ಚೈಮು ಠಾಣಾ ವ್ಯಾಪ್ತಿಯ ಪೊಲೀಸರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರ್ತಿ ಧ್ವಂಸಗೊಳಿಸಿದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಮೂರ್ತಿ ಧ್ವಂಸಗೊಳಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಇದುವರೆಗೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.
ಮೂರ್ತಿ ಧ್ವಂಸಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ DCP ಕಾವೆಂದ್ರ ಸಿಂಗ್ ಸಾಗರ್, ಠಾಣಾಧಿಕಾರಿ ಹೇಮರಾಜ್ ಸಿಂಗ್ ಗುರ್ಜರ್, ACP ಫೂಲಚಂದ್ ಮಾಣಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಶ್ವಾನದಳದ ಸಹಾಯದಿಂದ ಸುಮಾರು ಎರಡು ಗಂಟೆಗಳ ಸುದೀರ್ಘ ತನಿಖೆ ಕೈಗೊಂಡ ಈ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ದೇವಸ್ಥಾನದ ಪೂಜಾರಿಯ ಮೊಮ್ಮಗ ಮೂರ್ತಿಯನ್ನು ಧ್ವಂಸಗೊಳಿಸಿ ಬಳಿಕ ಮನೆಗೆ ತೆರಳಿ ಮಲಗಿದ್ದಾನೆ. ಶ್ವಾನದಳದ ಸಹಾಯ ಪಡೆದ ಪೊಲೀಸರು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದ್ದಾರೆ. ಆರೋಪಿ ಬೋದು ರಾಮ್ ಅಲಿಯಾಸ್ ಭಾರತ ಭೂಷಣ್ ಓರ್ವ ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನು ಕಳೆದ ಒಂದು ತಿಂಗಳಿನಿಂದ ಆಂಜನೇಯ ಸ್ವಾಮಿಯ ಪೂಜೆ ಹಾಗು ಅರ್ಚನೆಯಲ್ಲಿ ತೊಡಗಿದ್ದು, ಆಂಜನೇಯ ಸ್ವಾಮಿ ತನ್ನ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಎಂದು ಆರೋಪಿಸಿದ್ದಾನೆ. ಈ ಯುವಕ 3 ತಿಂಗಳಲ್ಲಿ ತನ್ನ ವಿವಾಹ ಜರುಗಿಸುವಂತೆ ಆಂಜನೇಯ ಸ್ವಾಮಿಗೆ ಬೇಡಿಕೆ ಸಲ್ಲಿಸಿದ್ದ ಎನ್ನಲಾಗಿದೆ. ಆದರೆ ಆತನ ಬೇಡಿಕೆ ಈಡೇರದ ಹಿನ್ನೆಲೆ ಕುಪಿತಗೊಂಡ ಆತ ಬೆಳಗ್ಗೆ ಎದ್ದು ಕಬ್ಬಿಣದ ಸಲಾಕೆಯಿಂದ ಮೂರ್ತಿಯನ್ನು ಧ್ವಂಸಗೊಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣದ ಸಂಪೂರ್ಣ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿ ಬೋಗಾರಾಮ್ ಈ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದಿದ್ದಾರೆ.