ಬೆಂಗಳೂರು: ಕೆಂಪು ಗುಲಾಬಿ ಈರುಳ್ಳಿ ರಫ್ತು ಸಂಪೂರ್ಣ ನಿಷೇಧವನ್ನು ಸಡಿಲಗೊಳಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಧನ್ಯವಾದ ಹೇಳಿದ್ದಾರೆ.
ಈರುಳ್ಳಿ ಬೆಲೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ಸಂಪೂರ್ಣ ನಿಷೇಧಿಸಿದ್ದರಿಂದ ರಾಜ್ಯದ ಕೆಂಪು ಗುಲಾಬಿ ಈರುಳ್ಳಿ ಬೆಳೆಗಾರರು ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಕೆಂಪು ಈರುಳ್ಳಿ ನಿಷೇಧ ತೆರುವುಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಗೆ ಕೇಂದ್ರ ಸ್ಪಂದಿಸಿ ನವೆಂಬರ್ 30ರವರೆಗೆ 9 ಸಾವಿರ ಟನ್‌ವರೆಗೆ ರಫ್ತಿಗೆ ಅವಕಾಶ ನೀಡಿದೆ. ಇದರಿಂದ ರಾಜ್ಯದ ಈರುಳ್ಳಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಡಾ. ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕೆಂಪು ಗುಲಾಬಿ ಈರುಳ್ಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ರಫ್ತು ನಂಬಿಯೇ ರಾಜ್ಯದ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ಆದ್ದರಿಂದ ರಫ್ತಿಗೆ ಯಾವುದೇ ನಿರ್ಬಂಧ ವಿಧಿಸದೇ ರೈತರ ನೆರವಿಗೆ ಧಾವಿಸಬೇಕು ಎಂದು ಉಪಮುಖ್ಯಮಂತ್ರಿಗಳು ಇದೇ ವೇಳೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.
ಈರುಳ್ಳಿ ರಫ್ತಿಗೆ ವಿನಾಯಿತಿ ಪಡೆಯಲು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಶಿಡ್ಲಘಟ್ಟದಲ್ಲಿ ಸೋಮವಾರ ರೈತರಿಗೆ ಭರವಸೆ ನೀಡಿದ್ದರು.
ನಿಬಂಧನೆ ಏನು?
ಪ್ರಸ್ತುತ ನವೆಂಬರ್ 30ರವರೆಗೆ 9 ಸಾವಿರ ಟನ್‌ವರೆಗೆ ರಫ್ತಿಗೆ ಅವಕಾಶ ನೀಡಲಾಗಿದೆ ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಚೆನ್ನೈ ಬಂದರಿನ ಮೂಲಕ ಮಾತ್ರ ರಫ್ತು ಮಾಡಬೇಕು. ಕರ್ನಾಟಕದ ತೋಟಗಾರಿಕೆ ಕಮಿಷನರ್ ಅವರು ಈರುಳ್ಳಿಗೆ ಮತ್ತು ರಫ್ತಿಗೆ ಪ್ರಮಾಣ ಪತ್ರ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಇರುವ ಹೆಚ್ಚುವರಿ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ರಫ್ತಿನ ಮೇಲೆ ನಿಗಾ ಇರಿಸಲಿದೆ.
ನಿಷೇಧ ಏಕಿತ್ತು ?
ಆಗಸ್ಟ್ ತಿಂಗಳಿನಿಂದ ಏರಿಕೆಯ ಹಾದಿಯಲ್ಲಿದ್ದ ಈರುಳ್ಳಿಯ ಬೆಲೆ ಏರಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಕೆಂಪು ಗುಲಾಬಿ ಈರುಳ್ಳಿ ರಫ್ತಿಗೆ ಸೆಪ್ಟೆಂಬರ್ ತಿಂಗಳಿನಿಂದ ನಿಷೇಧಿಸಲಾಗಿತ್ತು. ಈಗ ರಫ್ತು ನಿಷೇಧಕ್ಕೆ ವಿನಾಯ್ತಿ ನೀಡಲಾಗಿದೆ.
ರಫ್ತು ಎಲ್ಲಿಗೆ ?
ಗಾತ್ರದಲ್ಲಿ ಚಿಕ್ಕದಿರುವ ಗುಲಾಬಿ ಬಣ್ಣದ ಈರುಳ್ಳಿಯನ್ನು ಹೆಚ್ಚಾಗಿ ಶ್ರೀಲಂಕಾ, ಮಲೇಷ್ಯಾ ಮತ್ತಿತರ ದಕ್ಷಿಣ ಪೂರ್ವ ಏಷ್ಯಾ ದೇಶಗಳಿಗೆ ರಫ್ತು ಮಾಡಲಾಗುತ್ತದೆ.