ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದ ಆರೋಪಿಯಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿ, ಪಿಎಂಸಿ ಬ್ಯಾಂಕಿನಲ್ಲಿ ಹಣ ವಿತ್ ಡ್ರಾ ನಿಷೇಧ, ಅಸ್ಸಾಂನಲ್ಲಿ ಎನ್ಆರ್ ಸಿ ಜಾರಿ, ಸಂತ ರವಿದಾಸ್ ದೇವಾಲಯ ನೆಲಸಮ ಸೇರಿದಂತೆ ನಾಲ್ಕು ಪ್ರಮುಖ ಪ್ರಕರಣಗಳನ್ನು ಶುಕ್ರವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
1. ಐಎನ್ಎಕ್ಸ್ ಮೀಡಿಯಾ ಪ್ರಕರಣ
ಈ ಪ್ರಕರಣದ ಪ್ರಮುಖ ಆರೋಪಿಯಾಗಿ, ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಸೆಪ್ಟೆಂಬರ್ 30 ರಂದು ಚಿದಂಬರಂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ನ ತೀರ್ಪನ್ನು ಅವರು ಪ್ರಶ್ನಿಸಿ ಅ.15ರಂದು ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ.
2. ಪಿಎಂಸಿ ಬ್ಯಾಂಕಿನಲ್ಲಿ ಹಣ ಡ್ರಾ ನಿಷೇಧ ಪ್ರಕರಣ
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ)ನಲ್ಲಿ ಹಣ ಹಿಂಪಡೆಯುವ ನಿಷೇಧಕ್ಕೆ ಸಂಬಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ. ದೆಹಲಿ ಮೂಲದ ಬಿ.ಕೆ.ಮಿಶ್ರಾ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಬ್ಯಾಂಕುಗಳು ಮತ್ತು ಠೇವಣಿಗಳ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಅರ್ಜಿಯಲ್ಲಿ, 15 ಲಕ್ಷ ಖಾತೆದಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಶೇ.100 ವಿಮಾ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾರೆ.
3. ಸಂತ ರವಿದಾಸ್ ದೇವಸ್ಥಾನ ಪ್ರಕರಣ
ದೆಹಲಿಯ ತುಘಲಕ್ ಬಾದ್ ನಲ್ಲಿರುವ 500 ವರ್ಷಗಳಷ್ಟು ಹಳೆಯದಾದ ಸಂತ ರವಿದಾಸ್ ದೇವಾಲಯ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
4.ಅಸ್ಸಾಂ ನಲ್ಲಿ ಎನ್ಆರ್ಸಿ ಜಾರಿ
ಅಸ್ಸಾಂ ನಲ್ಲಿ ಎನ್ಆರ್ಸಿ ಜಾರಿಗೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.