ಚೆನ್ನೈ: ಐಎಎಸ್ ಅಧಿಕಾರಿಯ ರಾಜೀನಾಮೆ ಆಯ್ತು, ಈಗ ನ್ಯಾಯಾಧೀಶರ ರಾಜೀನಾಮೆ ಸರದಿ. ತಮ್ಮನ್ನು ಮೇಘಾಲಯ ಹೈಕೋರ್ಟ್ಗೆ ವರ್ಗಾವಣೆ ಮಾಡಿರುವ ಆದೇಶ ಮರುಪರಿಶೀಲಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ವಿ.ಕೆ. ತಹಿಲ್ ರಮಣಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ತಮ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತಿರಸ್ಕರಿಸಿದ ಮೂರು ದಿನಗಳ ಬಳಿಕ ನ್ಯಾಯಾಧೀಶರಾದ ವಿ.ಕೆ. ತಹಿಲ್ ರಮಣಿ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದು ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಿ ಅಂಗೀಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ರಾಜೀನಾಮೆ ಸಲ್ಲಿಸುವ ವಿಚಾರವನ್ನು ತಹಿಲ್ ರಮಣಿ ಅವರು ಪ್ರಸ್ತಾಪಿಸಿದ್ದರು. ಮದ್ರಾಸ್ ಹೈಕೋರ್ಟ್ನಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಸುಪ್ರೀಂ ಕೋರ್ಟಿನ ಕೊಲೀಜಿಯಂ ವರ್ಗಾವಣೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ನ್ಯಾಯಾಧೀಶರಾದ ವಿ.ಕೆ. ತಹಿಲ್ ರಮಣಿ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಕೊಲಿಜಿಯಂ ಇದೆ ಆಗಸ್ಟ್ 28ರಂದು ಮೇಘಾಲಯ ಹೈಕೋರ್ಟ್ಗೆ ವರ್ಗಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೇ ವೇಳೆ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಕೆ. ಮಿತ್ತಲ್ ಅವರನ್ನು ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಿದೆ. ಸೆಪ್ಟೆಂಬರ್ 3ರಂದು ವರ್ಗಾವಣೆ ನಿರ್ಣಯವನ್ನು ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ನಡುವೆ ನ್ಯಾಯಾಧೀಶರಾದ ವಿ.ಕೆ. ತಹಿಲ್ ರಮಣಿ ವರ್ಗಾವಣೆ ಆದೇಶ ಮರುಪರಿಶೀಲಿಸುವಂತೆ ಮನವಿ ಮಾಡಿಕೊಂಡರೂ ಫಲಪ್ರದವಾಗಲಿಲ್ಲ. ಆದುದರಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನ್ಯಾಯಾಧೀಶರಾದ ವಿ.ಕೆ. ತಹಿಲ್ ರಮಣಿ 2018, ಆಗಸ್ಟ್ 8ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.