ಭಾರತ - ಅಮೆರಿಕಾ ಸಂಬಂಧದ ಮೇಲೆ ಪನ್ನುನ್ ಪ್ರಕರಣದ ಕಾರ್ಮೋಡ: ಭಾರತ ಭೇಟಿಯನ್ನು ರದ್ದುಗೊಳಿಸಿದ ಅಧ್ಯಕ್ಷ ಬಿಡೆನ್

ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಇದರ ಸದಸ್ಯರಾಗಿವೆ.

Written by - Girish Linganna | Last Updated : Dec 19, 2023, 05:06 PM IST
  • ಪ್ರಸ್ತುತ ಸಂದರ್ಭದಲ್ಲಿ, ಈ ವಿಚಾರ ಈಗಷ್ಟೇ ಬೆಳಕಿಗೆ ಬರಲು ಆರಂಭಿಸಿದೆ.
  • ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ನೀರ ಮೇಲಿರುವ ಮಂಜುಗಡ್ಡೆಯ ತುದಿಯಷ್ಟೇ!
ಭಾರತ - ಅಮೆರಿಕಾ ಸಂಬಂಧದ ಮೇಲೆ ಪನ್ನುನ್ ಪ್ರಕರಣದ ಕಾರ್ಮೋಡ: ಭಾರತ ಭೇಟಿಯನ್ನು ರದ್ದುಗೊಳಿಸಿದ ಅಧ್ಯಕ್ಷ ಬಿಡೆನ್ title=

ಸಿಖ್ ಪ್ರತ್ಯೇಕತಾವಾದಿ ನಾಯಕ, ಅಮೆರಿಕಾ ನಿವಾಸಿಯಾಗಿರುವ ಗುರ್‌ಪತ್ವಂತ್ ಸಿಂಗ್ ಪನ್ನುನ್ ಹತ್ಯೆ ನಡೆಸಲು ನ್ಯೂಯಾರ್ಕ್ ನಗರದಲ್ಲಿ ವಿಫಲ ಯತ್ನ ನಡೆದಿತ್ತು. ಈ ನಾಟಕೀಯ ಪ್ರಕರಣದ ಪರಿಣಾಮವಾಗಿ ಬಹಳಷ್ಟು ಬೆಳವಣಿಗೆಗಳು ನಡೆದಿವೆ. ಇವುಗಳನ್ನು ಉತ್ಪ್ರೇಕ್ಷಿಸುವುದಾಗಲಿ, ಉಪೇಕ್ಷಿಸುವುದಾಗಲಿ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಮೆರಿಕಾದ ಅಟಾರ್ನಿ ಜನರಲ್ ಔಪಚಾರಿಕವಾಗಿ ವಿದೇಶಿ ಸರ್ಕಾರವೊಂದು ಅಮೆರಿಕಾದ ನೆಲದಲ್ಲಿ ಹತ್ಯೆಯೊಂದನ್ನು ಆಯೋಜಿಸಲು ಪ್ರಯತ್ನ ನಡೆಸಿದೆ ಎಂದು ಅಮೆರಿಕನ್ ಕಾನೂನು ಇಲಾಖೆಯಲ್ಲಿ ದೋಷಾರೋಪಣೆ ಮಾಡಿರುವುದು ಒಂದು ಗಂಭೀರ ಬೆಳವಣಿಗೆಯಾಗಿದೆ.

ಪ್ರಸ್ತುತ ಪನ್ನುನ್ ಪ್ರಕರಣ ಭಾರತದಂತಹ ಮಹತ್ವದ ದೇಶವನ್ನು ಒಳಗೊಂಡಿದೆ. ಭಾರತವನ್ನು ಅಮೆರಿಕಾ ತನ್ನ 'ಅನಿವಾರ್ಯ ಸಹಯೋಗಿ' ರಾಷ್ಟ್ರ ಎಂದು ಪರಿಗಣಿಸಿರುವುದರಿಂದ, ಈ ದೋಷಾರೋಪವನ್ನು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಮತ್ತು ಶ್ವೇತ ಭವನ ಎರಡೂ ಸೂಕ್ಷ್ಮವಾಗಿ ಅವಲೋಕಿಸಿರುವ ಸಾಧ್ಯತೆಗಳು ಹೆಚ್ಚು.

ಜನವರಿ 26, 2024ರಂದು ನಡೆಯಲಿರುವ ಭಾರತದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗುವಂತೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಭಾರತ ಆಹ್ವಾನ ನೀಡಿತ್ತು. ಆದರೆ ಬಿಡೆನ್ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಭಾರತಕ್ಕೆ ಈ ಸಂದರ್ಭದಲ್ಲಿ ಭೇಟಿ ನೀಡುವುದು ವಿವಾದಾತ್ಮಕ ವಿಚಾರವಾಗುವ ಸಾಧ್ಯತೆಗಳಿರುವುದರಿಂದ, ಬಿಡೆನ್ ಭಾರತದ ಆಹ್ವಾನವನ್ನು ತಿರಸ್ಕರಿಸಿರುವುದು ಆಶ್ಚರ್ಯಕರ ಬೆಳವಣಿಗೆಯೇನೂ ಅಲ್ಲ. ಅದರಲ್ಲೂ 2024ರಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ, ಅಧ್ಯಕ್ಷ ಬಿಡೆನ್ ಅವರು ತನ್ನನ್ನು ಇನ್ನೊಂದು ವಿವಾದಕ್ಕೆ ಸಿಲುಕಿಸಿಕೊಳ್ಳಲು ಇಷ್ಟಪಡುವ ಸಾಧ್ಯತೆಗಳಿಲ್ಲ. ಪ್ಯೂ ರಿಸರ್ಚ್ ಸೆಂಟರ್‌ನ ಗ್ಲೋಬಲ್ ಆ್ಯಟಿಟ್ಯೂಡ್ಸ್ ಪ್ರಾಜೆಕ್ಟ್ ಪ್ರಕಾರ, ಭಾರತದ ಕುರಿತು ಅಮೆರಿಕನ್ ನಾಗರಿಕರ ಅಭಿಪ್ರಾಯ ಇತ್ತೀಚಿನ ವರ್ಷಗಳಲ್ಲಿ ಋಣಾತ್ಮಕವಾಗಿ ಬದಲಾಗುತ್ತಿದೆ. ಬಹುಶಃ ಇದಕ್ಕೆ ಮೋದಿಯವರ ನಾಯಕತ್ವದ ಕುರಿತ ಆತಂಕಗಳೂ ಕಾರಣವಾಗಿರಬಹುದು ಎನ್ನಲಾಗಿದೆ.

ಜೂನ್ 20, 2023ರಂದ ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ 75 ಜನಪ್ರತಿನಿಧಿಗಳು ಅಧ್ಯಕ್ಷ ಬಿಡೆನ್ ಅವರಿಗೆ ಪತ್ರವೊಂದನ್ನು ಬರೆದು, ಭಾರತದ ಪ್ರಧಾನಿ ಮೋದಿಯವರು ಅಮೆರಿಕಾಗೆ ಸ್ಟೇಟ್ ವಿಸಿಟ್ ನೀಡುವ ಸಂದರ್ಭದಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಮಾನವ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದ ಕಳವಳಗಳನ್ನು ಚರ್ಚಿಸುವಂತೆ ಆಗ್ರಹಿಸಿದ್ದರು. ಈ ಪತ್ರ, ಡೆಮಾಕ್ರಟಿಕ್ ಪಕ್ಷದ ಬಹಳಷ್ಟು ಸದಸ್ಯರು ಭಾರತದ ಬೆಳವಣಿಗೆಗಳ ಕುರಿತು ಆತಂಕ ಹೊಂದಿದ್ದರು ಎಂದು ಸೂಚಿಸಿದೆ. ಜೂನ್ 8ರಂದು ಹ್ಯುಮನ್ ರೈಟ್ಸ್ ವಾಚ್ ಬರೆದ ಪತ್ರವೂ ಇದೇ ರೀತಿಯ ಕಳವಳಗಳನ್ನು ಸೂಚಿಸುತ್ತದೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮೋದಿಯವರನ್ನು ರಷ್ಯಾದೊಡನೆ ಅವರು ಹೊಂದಿರುವ ನಿಕಟ ಸ್ನೇಹದ ಕುರಿತು ಮತ್ತು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿರುವುದಕ್ಕೆ ಪ್ರತಿರೋಧ ವ್ಯಕ್ತಪಡಿಸದಿರುವ ರೀತಿಯ ವಿದೇಶಾಂಗ ನೀತಿಗಳ ಕುರಿತು ಹೆಚ್ಚಿನ ಟೀಕೆ ವ್ಯಕ್ತಪಡಿಸಿದ್ದರು. ಅದರೊಡನೆ, ಚೀನಾದೊಡನೆ ಗಡಿ ಉದ್ವಿಗ್ನತೆಯನ್ನು ನಿರ್ವಹಿಸಿದ ರೀತಿಯ ಕುರಿತು ಅವರು ಮೋದಿಯವರೊಡನೆ ಅಸಮಾಧಾನ ಹೊಂದಿದ್ದರು.

ಇದನ್ನೂ ಓದಿ- ಶತ್ರುಗಳಿಗೆ ನಡುಕ ಹುಟ್ಟಿಸಿದ ಭಾರತದ ಆಕಾಶ್: ಏಕಕಾಲದಲ್ಲಿ ನಾಲ್ಕು ಗುರಿಗಳ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿ ವ್ಯವಸ್ಥೆ

ಗಮನಾರ್ಹ ವಿಚಾರವೆಂದರೆ, ಜೂನ್ ತಿಂಗಳಲ್ಲಿ ಕೆನಡಾದ ವ್ಯಾಂಕೋವರ್ ನಲ್ಲಿ ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ಆರೋಪಗಳನ್ನು ಸಾರ್ವತ್ರಿಕಗೊಳಿಸಿದ್ದೇ ಶ್ವೇತ ಭವನ ಎನ್ನಲಾಗಿದೆ.

ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೆನಡಾದ ಅತ್ಯಂತ ಪ್ರಮುಖ ಭದ್ರತಾ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕೆಲವರಷ್ಟೇ ಗಮನಿಸಿದ್ದರು. ಆ ಸಂದರ್ಭದಲ್ಲಿ, ಕೆನಡಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೋಡಿ ಥಾಮಸ್ ಅವರು ಭಾರತಕ್ಕೆ ಆಗಮಿಸಿರಲಿಲ್ಲ. ಆ ಸಮಯದಲ್ಲಿ ಆಕೆ ಲಂಡನ್‌ಗೆ (ಯುಕೆ ಅಪಾರ ಸಂಖ್ಯೆಯಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ನೆಲೆಯಾಗಿದೆ) ಅನಧಿಕೃತ ಭೇಟಿ ನೀಡಿದ್ದು, ಕೆನಡಾದಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರನ ರಾಜಕೀಯ ಹತ್ಯೆಗೆ ಸಂಬಂಧಿಸಿದಂತೆ ಬೆಂಬಲ ಪಡೆಯಲು ಮತ್ತು ಮಾಹಿತಿ ಒದಗಿಸಲು ಉದ್ದೇಶಿಸಿದ್ದರು ಎನ್ನಲಾಗಿದೆ. ಈ ವಿಚಾರ ಕೆಲವು ದಿನಗಳಲ್ಲಿ ಜಾಗತಿಕವಾಗಿ ಬಯಲಾಗಲಿದ್ದು, ಕೆನಡಾ ಮತ್ತು ಭಾರತಗಳ ನಡುವೆ ನೈಜ ರಾಜತಾಂತ್ರಿಕ ಬಿಕ್ಕಟ್ಟಿಗೆ ಹಾದಿ ಮಾಡಿಕೊಡಲಿವೆ.

ಕೆನಡಾದ ಭದ್ರತಾ ಸಂಸ್ಥೆಗಳ ಬಳಿ ಬೇಸಿಗೆಯ ವೇಳೆ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ನಡೆಯುವ ಸಾಧ್ಯತೆಗಳಿವೆ ಎಂಬ ಕುರಿತು ಸಾಕಷ್ಟು ಮಾಹಿತಿಗಳು ಲಭ್ಯವಿದ್ದವು. ಆದರೂ ಅವುಗಳು ಆ ಹತ್ಯೆ ನಡೆಯದಂತೆ ತಡೆಯಲು ವಿಫಲವಾದವು. ಅದಾದ ಬಳಿಕ ಇನ್ನೂ ಹೆಚ್ಚು ಆಸಕ್ತಿಕರ ವಿದ್ಯಮಾನಗಳು ಜರುಗತೊಡಗಿದವು.

ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಇದರ ಸದಸ್ಯರಾಗಿವೆ. ಫೈವ್ ಐಸ್ ಸಂಘಟನೆಯ ಸದಸ್ಯ ರಾಷ್ಟ್ರಗಳು ಕೆನಡಾ ನೆಲದಲ್ಲಿ ನಡೆದ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಜಂಟಿ ಹೇಳಿಕೆ ನೀಡಿ, ನವದೆಹಲಿಯನ್ನು ಖಂಡಿಸಲು ಸಾಧ್ಯವಿದೆ ಎಂದು ಕೆನಡಾ ನಂಬಿಕೆ ಇಟ್ಟುಕೊಂಡಿತ್ತು. ಆದರೆ ಫೈವ್ ಐಸ್ ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳು ಬೇರೆಯದೇ ದೃಷ್ಟಿಕೋನ ಹೊಂದಿದ್ದವು.

ಪ್ರಸ್ತುತ ಸಂದರ್ಭದಲ್ಲಿ, ಈ ವಿಚಾರ ಈಗಷ್ಟೇ ಬೆಳಕಿಗೆ ಬರಲು ಆರಂಭಿಸಿದೆ. ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ನೀರ ಮೇಲಿರುವ ಮಂಜುಗಡ್ಡೆಯ ತುದಿಯಷ್ಟೇ! ಒಂದು ವೇಳೆ, 52 ವರ್ಷ ವಯಸ್ಸಿನ ಭಾರತೀಯ ಮೂಲದ ಶಂಕಿತ ವ್ಯಕ್ತಿ ನಿಖಿಲ್ ಗುಪ್ತಾ ಎಂಬಾತ ಏನಾದರೂ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗುವ ಹಿನ್ನೆಲೆ ಹೊಂದಿದ್ದರೆ, ತಪ್ಪೊಪ್ಪಿಗೆ ನೀಡಲು ಸಿದ್ಧವಾಗಿದ್ದರೆ, ಆಗ ಬಹಳಷ್ಟು ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ. ಆತ ಪ್ರಸ್ತುತ ಪ್ರಾಗ್‌ನಲ್ಲಿದ್ದು, ಅಮೆರಿಕಾ ಆತನ ಹಸ್ತಾಂತರಕ್ಕೆ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ- ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸಿದ ಭಾರತ: ನಮ್ಮ ಆಗಸಗಳಿನ್ನು ಸುರಕ್ಷಿತ

'ದ ಇಂಟರ್‌ಸೆಪ್ಟ್' ಎಂಬ ಅಮೆರಿಕನ್ ಮಾಧ್ಯಮ ಇತ್ತೀಚೆಗೆ ಒಂದು ತನಿಖಾ ಲೇಖನವನ್ನು ಪ್ರಕಟಿಸಿದ್ದು, ಅದರಲ್ಲಿ ನೈಜ ದಾಖಲೆಯನ್ನು ಉಲ್ಲೇಖಿಸಿ ತಾನು ವರದಿ ಮಾಡಿದ್ದೇನೆ ಎಂದು ಅದು ಹೇಳಿಕೊಂಡಿದೆ. ಈಬೇ ಸಂಸ್ಥೆಯ ಸ್ಥಾಪಕ ಮತ್ತು ಅಮೆರಿಕಾದ ಪ್ರಸಿದ್ಧ ಬಿಲಿಯನೇರ್ ಸಮಾಜ ಸೇವಕ ಪಿಯರ್ ಓಮಿದ್ಯಾರ್ ದ ಇಂಟರ್‌ಸೆಪ್ಟ್ ಮಾಧ್ಯಮ ಸಂಸ್ಥೆಯನ್ನು ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ. ಓಮಿದ್ಯಾರ್ ಡೆಮಾಕ್ರಟಿಕ್ ಪಕ್ಷಕ್ಕೆ ಸಂಬಂಧಿಸಿದ ಸಂಸ್ಥೆಗಳ ಮತ್ತು ಅಭ್ಯರ್ಥಿಗಳ ಪ್ರಮುಖ ಬೆಂಬಲಿಗನಾಗಿದ್ದಾರೆ. ಅವರ ಮಾಧ್ಯಮ ಜಾಲ ಪ್ರಮುಖವಾಗಿ ವಿಶ್ವಾಸ ವಿರೋಧಿ ಚಟುವಟಿಕೆಗಳನ್ನು ಬೆಳಕಿಗೆ ತರುವ ಉದ್ದೇಶ ಹೊಂದಿದೆ.

ಇಂಟರ್‌ಸೆಪ್ಟ್ ವರದಿಯಲ್ಲಿ, ಭಾರತ ಜಾಗತಿಕವಾಗಿ ಹತ್ಯೆಗಳನ್ನು ನಡೆಸುವ ಪ್ರಯತ್ನ ಕೈಗೊಂಡಿದೆ ಎಂದು ಆರೋಪಿಸಲಾಗಿದ್ದು, ಇದೊಂದು ಸೂಕ್ಷ್ಮ ಮತ್ತು ವಿವಾದಾತ್ಮಕ ವಿಚಾರವಾಗಿದೆ.

ಭಾರತೀಯ ರಾಜತಾಂತ್ರಿಕರು ಈ ವರದಿಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇಂಟರ್‌ಸೆಪ್ಟ್ ನಿಯತಕಾಲಿಕ ಸುಳ್ಳು ವರದಿಗಳನ್ನು ಹಂಚುವಲ್ಲಿ ಪ್ರಸಿದ್ಧವಾಗಿದೆ ಮತ್ತು ಅದಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆಯ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

ಭಾರತೀಯ ವಿಚಾರಗಳ ತಜ್ಞರಾಗಿರುವ ಡೇನಿಯಲ್ ಎಸ್ ಮಾರ್ಕೀ ಅವರು ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪನ್ನುನ್ ಪ್ರಕರಣದಲ್ಲಿ ಭಾರತದ ಮೇಲೆ ಆರೋಪಗಳು ಎದುರಾಗಿದ್ದು, ಇದು ಭಾರತದ ಭದ್ರತಾ ಅಧಿಕಾರಿಗಳು ಇಂತಹ ಕಾರ್ಯಾಚರಣೆಗಳನ್ನು ಆಯೋಜಿಸುತ್ತಿದ್ದಾರೆ ಮತ್ತು ಅದಕ್ಕೆ ಹಣಕಾಸಿನ ಪೂರೈಕೆ ನಡೆಸುತ್ತಿದ್ದಾರೆ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ ಎಂದಿದ್ದಾರೆ. ಒಂದು ವೇಳೆ ಈ ವಿಚಾರಗಳು ನಿಜವೇ ಆಗಿದ್ದರೆ, ಭಾರತ ಸರ್ಕಾರದ ನೀತಿಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ ಎನ್ನಬಹುದು. ಆದರೆ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಬದಲಾವಣೆಗಳನ್ನು ತರಲು ಯಾರು ಅನುಮತಿಸಿರಬಹುದು ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಕೀ ಅವರು ಭಾರತ ಸರ್ಕಾರ ವಲಸಿಗ ಸಿಖ್ ಸಮುದಾಯದಲ್ಲಿರುವ ಭಿನ್ನಮತೀಯರ ಹತ್ಯೆಗೈಯುವ ಯೋಜನೆಯನ್ನು ರೂಪಿಸಿರುವ ಸಾಧ್ಯತೆಗಳಿವೆ ಎಂಬುದನ್ನು ನಂಬಲು ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ. ಈ ವಿಚಾರ ಈಗ ಅಮೆರಿಕಾದ ಅಧಿಕಾರಿಗಳ ವಲಯದಲ್ಲೂ ಪ್ರಚಲಿತವಾಗುತ್ತಿದ್ದು, ಪನ್ನುನ್ ಪ್ರಕರಣವೂ ಇದರಲ್ಲಿ ಪಾತ್ರವಹಿಸಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ- ಭಾರತದ ಗಗನಯಾನ: ಮಾನವ ಬಾಹ್ಯಾಕಾಶ ಯಾನಕ್ಕೆ ವ್ಯೋಮಮಿತ್ರಳ ಯೋಗದಾನ

ಕಳೆದ ತಿಂಗಳು ಹಲವು ಮಾಧ್ಯಮಗಳು ಭಾರತದ ಅತ್ಯಂತ ಪ್ರಮುಖ ಬಾಹ್ಯ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (R&AW - ರಾ) ಉತ್ತರ ಅಮೆರಿಕಾ ಪ್ರಾಂತ್ಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದ್ದವು. ಕೆನಡಾದಲ್ಲಿ ನಡೆದ ಹತ್ಯೆ, ಅಮೆರಿಕಾದಲ್ಲಿ ನಡೆದ ಹತ್ಯಾ ಪ್ರಯತ್ನ, ಇದಕ್ಕೆ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾಗಳು ಪ್ರತಿಕ್ರಿಯಿಸಿದ ರೀತಿ ಅತ್ಯಂತ ತೀವ್ರವಾಗಿದ್ದವು ಎನ್ನಲಾಗಿದೆ. ಈ ಹಂತದ ತನಕವೂ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಾ ಹತ್ಯಾ ಪ್ರಯತ್ನಗಳನ್ನು ನಡೆಸಿದ ಎಂಬ ಯಾವುದೇ ಆರೋಪಗಳು ಎದುರಾಗಿರಲಿಲ್ಲ. ಆದರೆ ಈ ಆರೋಪಿತ ಹತ್ಯೆ ಮತ್ತು ಹತ್ಯಾ ಪ್ರಯತ್ನಗಳು ರಾಜತಾಂತ್ರಿಕವಾಗಿ ಮತ್ತು ವ್ಯಾವಹಾರಿಕವಾಗಿ ಭಾರತಕ್ಕೆ ಅತ್ಯಂತ ನಿಕಟವಾದ ರಾಷ್ಟ್ರಗಳಲ್ಲಿ ನಡೆದಿದ್ದು, ಈ ರಾಷ್ಟ್ರಗಳು ಜಾಗತಿಕ ಭದ್ರತಾ ವಿಚಾರದಲ್ಲೂ ಭಾರತಕ್ಕೆ ಆತ್ಮೀಯವಾಗಿದ್ದವು. ಈ ಕಾರಣದಿಂದಾಗಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ.

ರಾ ನೇರವಾಗಿ ಭಾರತದ ಪ್ರಧಾನ ಮಂತ್ರಿಗಳಿಗೆ ವರದಿ ಮಾಡುವ ಸಂಸ್ಥೆಯಾಗಿದೆ. ಪ್ರಧಾನ ಮಂತ್ರಿಯವರ ಕಚೇರಿಯ ಒಂದು ಭಾಗವಾಗಿರುವ ಸಂಪುಟ ಕಾರ್ಯಾಲಯದಲ್ಲಿರುವ ರಾ ಸಂಸ್ಥೆಯ ಮುಖ್ಯಸ್ಥರಿಗೆ ಕಾರ್ಯದರ್ಶಿ (ಸಂಶೋಧನಾ) ಎಂಬ ಹುದ್ದೆಯನ್ನು ಒದಗಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News