ಯಾದಗಿರಿ: ಹಿಮಾಚಲ ಪ್ರದೇಶ ಹಾಗೂ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷದ ಫಲಿತಾಂಶ ಸುಧಾರಿಸಿದೆ. ನಾವು ಗೆದ್ದು ಸೋತಿದ್ದೇವೆ, ರಾಹುಲ್ ಗಾಂಧಿ ಅವರಿಗೆ ಜನರ ಬೆಂಬಲ ಸಿಕ್ಕಿದೆ. ಈ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪ್ರಭಾವ ಬಿರಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗುಜರಾತ್ ನಲ್ಲಿ ನಾವು ಗೆದ್ದು ಸೋತಿದ್ದೇವೆ. ಗುಜರಾತ್ನಲ್ಲಿ ಮೋದಿ ಫಲಿತಾಂಶ ಕುಗ್ಗಿದೆ. ಅಲ್ಲಿನ ಜನ ಈಗಲೂ ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಒಪ್ಪಿಲ್ಲ. ಅಲ್ಲಿ ಮೋದಿ ಪ್ರಭಾವವಿದ್ದಿದ್ದರೆ, ಕಾಂಗ್ರೆಸ್ ಸಂಪೂರ್ಣವಾಗಿ ಸೋಲಬೇಕಿತ್ತಲ್ಲವೇ? ಎಂದು ಮರು ಪ್ರಶ್ನಿಸಿದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಮತಗಳ ಶೇಖಡವಾರು ನೋಡಿದಾಗ ಪಕ್ಷಗಳು ಪಡೆದ ಮತಗಳ ಬಗ್ಗೆ ತಿಳಿಯುತ್ತದೆ. ನಾವು ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಗುಜರಾತ್ ನಲ್ಲಿ ಕೇಂದ್ರದ ಅಧಿಕಾರದ ಪ್ರಭಾವ ಹಾಗೂ ಹಣ ಬಳಕೆಯಿಂದ ಬಿಜೆಪಿ ಗೆಲುವಿಗೆ ಕಾರಣವಾಗಿರಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಸಿದ್ಧರಾಮಯ್ಯ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳ ಫಲಿತಾಂಶಗಳು 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಯಾವುದೀ ಪ್ರಭಾವ ಬೀರುವುದಿಲ್ಲ. ನಾವೇ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಜೆಡಿಎಸ್ ಜತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಜೆಡಿಎಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆಲ್ಲಲಿದೆ. ಜತೆಗೆ ಜನರು ಬಿಜೆಪಿ ಪರವಾಗಿಲ್ಲ. ಅದಕ್ಕೆ ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನ ಯಾತ್ರೆ ಸಭೆಯಲ್ಲಿದ್ದ ಖಾಲಿ ಕುರ್ಚಿಗಳೇ ಸಾಕ್ಷಿ ಎಂದು ನುಡಿದರು.
ಅಲ್ಲದೆ, ಕಾನೂನು ಸುವ್ಯವಸ್ಥೆ, ತನಿಖೆಗಳ ಬಗ್ಗೆ ಬಿಜೆಪಿ ನಮಗೆ ಹೇಳಬೇಕಾದ ಅಗತ್ಯವಿಲ್ಲ. ಗುಜರಾತ್ ಕಾನೂನು ವ್ಯವಸ್ಥೆಯೇ ಹದಗೆಟ್ಟಿದೆ ಎಂದು ಹೇಳುವ ಮೂಲಕ ಬೆಂಗಳೂರಿನಲ್ಲಿ ರಾಜನಾಥ್ ಸಿಂಗ್ ಹೇಳಿಕೆ ಸಿಎಂ ತಿರುಗೇಟು ನೀಡಿದರು.