ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರದಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತದ ಆರು ತಿಂಗಳ ವಿಸ್ತರಣೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಈಗ ಲೋಕಸಭೆ ಸಮ್ಮತಿ ನೀಡಿದೆ ಎನ್ನಲಾಗಿದೆ.
ಈ ವರ್ಷದ ಅಂತ್ಯದ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು. ಅಲ್ಲದೆ ಇದೇ ವೇಳೆ ಈ ಹಿಂದಿನ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಬದಲಿಸಲು 2019 ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು.
"ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಅಸ್ತಿತ್ವದಲ್ಲಿಲ್ಲ, ಆದ್ದರಿಂದ ನಾನು ರಾಷ್ಟ್ರಪತಿ ಆಡಳಿತವನ್ನು ಮತ್ತೆ ಆರು ತಿಂಗಳವರೆಗೆ ವಿಸ್ತರಿಸುವ ಮಸೂದೆಯನ್ನು ತಂದಿದ್ದೇನೆ" ಎಂದು ಶಾ ಸಂಸದರಿಗೆ ತಿಳಿಸಿದರು. "ಚುನಾವಣಾ ಆಯೋಗವು ಕೇಂದ್ರ ಮತ್ತು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದೆ ಮತ್ತು ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಿದೆ ಎಂದು ನಿರ್ಧರಿಸಿದೆ" ಎಂದು ಅಮಿತ್ ಶಾ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ಪ್ರಮುಖವಾಗಿ ರಂಜಾನ್, ಅಮರನಾಥ ಯಾತ್ರೆ ಮತ್ತು ಭದ್ರತಾ ಕಾರಣಗಳಿಂದಾಗಿ ಚುನಾವಣೆ ವಿಳಂಬವಾಗಿದೆ ಎಂದು ಶಾ ಹೇಳಿದರು.
ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇಕಡಾ 43 ರಷ್ಟು ಮೀಸಲಾತಿ ಲಭ್ಯವಿದೆ ಮತ್ತು ಇದರ ಅಡಿಯಲ್ಲಿ ಶೇಕಡಾ 3 ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಮೀಸಲಿಡಲಾಗಿದೆ ಎಂದು ಶಾ ಹೇಳಿದರು. ಈ ನೂತನ ಮಸೂದೆಯು ರಾಜ್ಯದ ಅಂತರರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇಕಡಾ 3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.
ಮಸೂದೆ ಮಂಡನೆ ವೇಳೆ ಮಾತನಾಡಿದ ಶಾ 'ಈ ಮೀಸಲಾತಿ ಯಾರನ್ನೂ ಕೂಡ ಮೆಚ್ಚಸಲು ಅಲ್ಲ' ಬದಲಾಗಿ ನಿರಂತರ ದಾಳಿ ಹಾಗೂ ಬಾಂಬ್ ಸ್ಪೋಟದಂತಹ ಘಟನೆಗಳಿಂದಾಗಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಶ್ರಯ ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈಗ ಈ ಮಸೂದೆಯಿಂದಾಗಿ ಕಥುವಾ, ಸಾಂಬಾ ಮತ್ತು ಜಮ್ಮುವಿನಲ್ಲಿ ವಾಸಿಸುವ 3.5 ಲಕ್ಷ ಜನರಿಗೆ ಸಹಾಯವಾಗಲಿದೆ ಎಂದು ಶಾ ಹೇಳಿದರು.