ಬೆಂಗಳೂರು: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಜೈಲು ಸೇರಿ ಜಾಮೀನು ಪಡೆದಿರುವ ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಕೂಡಲೇ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ಕೋರ್ಟ್ ಗೆ ಹಾಜರುಪಡಿಸುವಂತೆ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಿದೆ.
ಏಳು ವರ್ಷಗಳ ಹಿಂದೆ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮಹಿಳೆಯೊಬ್ಬರ ಬಗ್ಗೆ ಅವಹೇಳನಕಾರಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ, ಈ ವರದಿಯಿಂದಾಗಿ ತಮ್ಮ ತೇಜೋವಧೆಯಾಗಿದೆ. ತಮ್ಮ ತೇಜೋವಧೆ ಮಾಡಲೆಂದೇ ವರದಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಸಾಕಷ್ಟು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತಾದರೂ, ಬೆಳಗೆರೆಯವರು ಸಬೂಬು ಹೇಳಿ ಪ್ರತಿ ಬಾರಿಯೂ ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದರು.ಈ ಪ್ರಕರಣದಲ್ಲಿ ಎರಡು ಬಾರಿ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ರವಿಬೆಳಗೆರೆ ಅವರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಕೋರ್ಟ್ 3 ದಿನ ಷರತ್ತು ಬದ್ಧ ಮಧ್ಯಾಂತರ ಜಾಮೀನು ನೀಡಿತ್ತು. ಆದರೀಗ ಈ ವಾರೆಂಟ್ನಿಂದಾಗಿ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.