ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಡಿಎ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದ ಬಿಜೆಪಿಯ ರೆಬೆಲ್ ನಾಯಕ, ಸಂಸದ, ಚಿತ್ರನಟ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019 ಲೋಕಸಭೆ ಚುನಾವಣೆಯಲ್ಲಿ "ಬಿಹಾರಿ ಬಾಬು"ಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಬಿಹಾರದ ಪಟ್ನಾ ಸಾಹೀಬ್ ಕ್ಷೇತ್ರದ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಬಿಜೆಪಿಯ ರೆಬೆಲ್ ನಾಯಕ ಎಂದು ಗುರುತಿಸಿಕೊಂಡಿರುವ ಶತ್ರುಘ್ನ ಸಿನ್ಹಾ, ಪಕ್ಷಲ್ಲಿದ್ದುಕೊಂಡೇ ಮೋದಿಯವರ ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಕ್ರಮವನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ತಮ್ಮ ಟೀಕೆಗಳಿಂದಾಗಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದರು. ಆಡ್ವಾಣಿಯನ್ನು ಬಿಜೆಪಿ ನಾಯಕರು ನಡೆಸಿಕೊಂಡ ರೀತಿಗೂ ಸಿನ್ಹಾ ವಾಗ್ದಾಳಿ ನಡೆಸಿದ್ದರು.
2009 ಮತ್ತು 2014ರಲ್ಲಿ ಪಾಟ್ನಾ ಸಾಹಿಬ್ ಕ್ಷೇತ್ರ ಪ್ರತಿನಿಧಿಸಿದ್ದ ಅವರು, ಈ ಬಾರಿ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪಾಟ್ನಾ ಸಾಹೀಬ್ ಕ್ಷೇತ್ರದಿಂದ ಶತ್ರುಘ್ನ ಸಿನ್ಹಾ ಸ್ಪರ್ಧಿಸಿದರೆ ಅವರನ್ನು ಸೋಲಿಸುವ ಉದ್ದೇಶದಿಂದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.