ನವದೆಹಲಿ: 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ತಂಬಾಕು ಉತ್ಪನ್ನಗಳಿಗೆ ನಿಷೇಧ ಹೇರುವ ಮೂಲಕ ಚುನಾವಣಾ ಕ್ರಮದಲ್ಲಿ ಸುಧಾರಣೆ ತರಲು ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ವೇಳೆ ಮತಗಟ್ಟೆ ಸಮೀಪದಲ್ಲಿ ಅಥವಾ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
"ದೇಶದ ಎಲ್ಲಾ ಮತಗಟ್ಟೆಗಳನ್ನು ಕೇವಲ ಧೂಮಪಾನ ಮುಕ್ತವಷ್ಟೇ ಅಲ್ಲದೆ, ಬೀಡಿ, ಸಿಗರೇಟು, ಗುಟ್ಕಾ, ಜಗಿಯುವ ತಂಬಾಕು ಉತ್ಪನ್ನಗಳೆಲ್ಲವನ್ನೂ ಸೇರಿದಂತೆ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಎಲ್ಲೆಡೆ ಬ್ಯಾನರ್ ಹಾಕಬೇಕು. ಈ ಬಗ್ಗೆ ಅಲ್ಲಿನ ಪ್ರಿಸೈಡಿಂಗ್ ಆಫೀಸರ್ ಗಮನಹರಿಸಿ, ಕಡ್ಡಾಯವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು" ಎಂದು ಚುನಾವಣಾ ಆಯೋಗ ಮಾರ್ಗಸೂಚಿಯಲ್ಲಿ ತಿಳಿಸಿದೆ.