ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಕುತ್ ಮಾರಮ್ಮನ ದೇವಾಲಯದಲ್ಲಿ ವಿತರಿಸಿದ ಪ್ರಸಾದದಲ್ಲಿ ವಿಷ ಬೆರೆಸಿದ್ದ ಕಾರಣ 11 ಮಂದಿ ಸಾವನ್ನಿಪ್ಪಿದ ಮನಕಲಕುವ ಘಟನೆ ಶುಕ್ರವಾರ ನಡೆದಿದೆ.
ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 90ಕ್ಕೂ ಹೆಚ್ಚು ಮಂದಿ ಮೈಸೂರು, ಚಾಮರಾಜನಗರ, ಕೊಳ್ಳೇಗಾಲದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಆರ್ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡ 45ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಅಸ್ವಸ್ಥರಾದವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ಅಸ್ವಸ್ಥಗೊಂಡವರಲ್ಲಿ ಮಕ್ಕಳು, ವಯಸ್ಸಾದವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಸುಳುವಾಡಿಯ ಕಿಚ್ಕುತ್ ಮಾರಮ್ಮ ದೇವಸ್ಥಾನ ಚಿಕ್ಕದಾಗಿದ್ದು, ನೂತನ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆಯೇ ವೈಮನಸ್ಸಿತ್ತು ಎನ್ನಲಾಗಿದೆ. ಈ ವೈಷಮ್ಯವೇ ಆಹಾರದಲ್ಲಿ ವಿಷ ಬೆರೆಸಲು ಕಾರಣವಾಗಿದೆಯೇ ಎಂಬ ಸಂದೇಹ ಮೂಡಿದೆ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯರೂ ಕೀಟನಾಶಕ ಬೆರಕೆಯಾಗಿರುವ ಶಂಕೆ ಇದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಆಹಾರದಲ್ಲಿ ಆರ್ಗನೋ ಫಾಸ್ಪರಸ್ ಎಂಬ ಕೀಟನಾಶಕದ ಅಂಶ ಬೆರೆತಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಸ್ವಸ್ಥರ ವಾಂತಿಯ ಸ್ಯಾಂಪಲ್ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ ಎಂದು ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.
ಘಟನೆ ಏನು?
ಶುಕ್ರವಾರ ಸುಳುವಾಡಿ ಗ್ರಾಮದ ಕಿಚ್ ಕುತ್ ಮಾರಮ್ಮ ದೇವಸ್ಥಾನದಲ್ಲಿ ಗೋಪುರ ನಿರ್ಮಾಣ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ಏರ್ಪಡಿಸಲಾಗಿತ್ತು. ಪೂಜೆಯ ಬಳಿಕ ಅನ್ನಸಂತರ್ಪಣೆಗಾಗಿ ಟೊಮ್ಯಾಟೋ ಬಾತ್ ಮತ್ತು ಪಂಚಾಮೃತ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಸೇರಿದ್ದ 90ಕ್ಕೂ ಹೆಚ್ಚು ಜನ ಪ್ರಸಾದ ಸೇವಿಸಿದ್ದರು. ಕೆಲವರು ದೇವಾಲಯದ ಸಮೀಪವೇ ತಲೆಸುತ್ತು ಬಂದು ವಾಂತಿ ಮಾಡಿಕೊಂಡಿದ್ದರು. ಇನ್ನು ಕೆಲವರಿಗೆ ತಂತಮ್ಮ ಗ್ರಾಮಗಳಿಗೆ ಹಿಂದಿರುಗಿದ ಬಳಿಕ ವಾಂತಿ ಕಾಣಿಸಿಕೊಂಡಿತ್ತು.