Plants for Vastu: ಪ್ರತಿಯೊಬ್ಬ ವ್ಯಕ್ತಿಗೂ ಅಧಿಕಾರ, ಉತ್ತಮ ಸ್ಥಾನಮಾನ, ಗೌರವ ಸಿಗಬೇಕೆಂದು ಆಸೆ ಇರುತ್ತದೆ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ, ಜ್ಯೋತಿಷ್ಯ, ವಾಸ್ತು ಸಲಹೆಗಳನ್ನು ಅನುಸರಿಸುತ್ತಾರೆ. ಇನ್ನು ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಮತ್ತು ತುಳಸಿಯ ಹೊರತಾಗಿ ಇನ್ನೂ ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಟ್ಟರೆ ಶುಭ ಎಂದು ಪರಿಗಣಿಸಲಾಗಿದೆ. ಈ ಗಿಡಗಳನ್ನು ನೆಟ್ಟ ತಕ್ಷಣ, ಹಣ ಮತ್ತು ಯಶಸ್ಸು ಅಯಸ್ಕಾಂತದಂತೆ ನಿಮ್ಮ ಬಳಿ ಸೆಳೆಯುತ್ತದೆ.
ಕ್ರಾಸ್ಸುಲಾ ಸಸ್ಯ: ನೀವು ಆರ್ಥಿಕ ಪರಿಸ್ಥಿತಿಯಲ್ಲಿ ತ್ವರಿತ ಪ್ರಗತಿಯನ್ನು ಕಾಣಬೇಕಾದರೆ ಮನೆಯಲ್ಲಿ ಕ್ರಾಸ್ಸುಲಾ ಸಸ್ಯ ಅಥವಾ ಜೇಡ್ ಮರವನ್ನು ನೆಡಿರಿ. ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಇಟ್ಟರೆ, ಕೆಲವೇ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ.
ಬಾಳೆಗಿಡ: ಮನೆಯಲ್ಲಿ ಬಾಳೆಗಿಡವನ್ನು ನೆಟ್ಟರೆ ತುಂಬಾ ಮಂಗಳಕರ ಎಂಬುದು ಹಿಂದೂ ಧರ್ಮದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಬಾಳೆ ಗಿಡ ನೆಟ್ಟ ಮನೆಯಲ್ಲಿ ಅದೃಷ್ಟ ತಾನಾಗಿಯೇ ಉದ್ಭವಿಸುತ್ತದೆ ಎಂಬ ಮಾತಿದೆ. ಭಗವಾನ್ ವಿಷ್ಣು ಮತ್ತು ಮಹಾಲಕ್ಷ್ಮೀ ಅನುಗ್ರಹದಿಂದ ಮನೆಯಲ್ಲಿ ಯಾವಾಗಲೂ ಸಂತೋಷ, ಸಮೃದ್ಧಿ ಇರುತ್ತದೆ.
ಶಮಿ ವೃಕ್ಷ: ಶನಿಯ ಆಶೀರ್ವಾದ ಪಡೆಯಲು ಮನೆಯಲ್ಲಿ ಶಮಿ ಗಿಡ ನೆಡುವುದು ಅಥವಾ ಶಮಿ ವೃಕ್ಷವನ್ನು ಪೂಜಿಸುವುದು, ಅದಕ್ಕೆ ನೀರನ್ನು ಅರ್ಪಿಸುವುದು ತುಂಬಾ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೊತೆಗೆ ಅಪಾರ ಸಂಪತ್ತು ಮತ್ತು ಪ್ರಗತಿ ಇರುತ್ತದೆ ಎಂದು ಹೇಳಲಾಗುತ್ತದೆ.
ಪಾರಿಜಾತ ವೃಕ್ಷ: ಹಿಂದೂ ಧರ್ಮಗ್ರಂಥಗಳಲ್ಲಿ ಪಾರಿಜಾತ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಪಾರಿಜಾತ ಹೂವುಗಳು ವಿಷ್ಣುವಿಗೆ ಬಹಳ ಪ್ರಿಯವಾಗಿದ್ದು, ಇದು ಮನೆಯಲ್ಲಿ ಸದಾ ಸುಖ, ನೆಮ್ಮದಿ ಇರುವಂತೆ ನೋಡಿಕೊಳ್ಳುತ್ತದೆ.
ಆಲದ ಮರ: ಆಲದ ಮರವನ್ನು ಪೂಜಿಸುವುದರಿಂದ ಅನೇಕ ದೇವತೆಗಳ ಆಶೀರ್ವಾದ ಸಿಗುತ್ತದೆ. ಬ್ರಹ್ಮ, ವಿಷ್ಣು, ಶಿವ ಮತ್ತು ಮಾತೆ ಲಕ್ಷ್ಮಿ ಆಲದ ಮರದಲ್ಲಿ ನೆಲೆಸಿರುತ್ತಾರೆ ಎಂಬುದು ನಂಬಿಕೆ. ಈ ಹಿನ್ನೆಲೆಯಲ್ಲಿ ಈ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ದೀಪವನ್ನು ಬೆಳಗಿಸುವ ಮೂಲಕ ಪೂಜೆ ಮಾಡಿದರೆ ಒಳಿತಾಗುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)