Varalakshmi Vrata: ವರಮಹಾಲಕ್ಷ್ಮಿ ವ್ರತ ವಿಧಿ-ವಿಧಾನ ಇಲ್ಲಿದೆ

ವರಮಹಾಲಕ್ಷ್ಮೀ ಅನ್ನು ಪೂಜಿಸಲು ಯಾವುದೇ ಜಾತಿ-ಭೇದ, ಮೇಲು-ಕೀಳು ಎಂಬುದಿಲ್ಲ. ಭಕ್ತಿಯಿಂದ ಯಾರಾದರೂ ತಾಯಿ ವರಮಹಾಲಕ್ಷ್ಮೀಯನ್ನು ಪೂಜಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಬಹುದು.

Written by - Yashaswini V | Last Updated : Aug 20, 2021, 07:24 AM IST
  • ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ, ನಾವು ತಾಯಿಯನ್ನು ವರಲಕ್ಷ್ಮಿ ರೂಪದಲ್ಲಿ ಪೂಜಿಸುತ್ತೇವೆ
  • ವರಮಹಾಲಕ್ಷ್ಮೀಗೆ ಹೂಗಳೆಂದರೆ ಅಚ್ಚು ಮೆಚ್ಚು. ಅದರಲ್ಲೂ ಕಮಲದ ಹೂ ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ
  • ಪೂಜೆಗೆ ಹಸಿರು ಬಣ್ಣದ ರವಿಕೆ ಬಟ್ಟೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೆವೇದ್ಯಕ್ಕೆ ಸಜ್ಜಿಗೆ ಅಥವಾ ಹೆಸರು ಬೆಳೆ ಪಾಯಸ ತಯಾರಿಸಿ ಇಡಿ
Varalakshmi Vrata: ವರಮಹಾಲಕ್ಷ್ಮಿ ವ್ರತ ವಿಧಿ-ವಿಧಾನ ಇಲ್ಲಿದೆ title=
Varalakshmi Puja Vidhi

ಬೆಂಗಳೂರು: ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ, ನಾವು ತಾಯಿಯನ್ನು ವರಲಕ್ಷ್ಮಿ ರೂಪದಲ್ಲಿ ಪೂಜಿಸುತ್ತೇವೆ. ಒಂದೊಮ್ಮೆ ವರಮಹಾಲಕ್ಷ್ಮೀ ಶುಕ್ರವಾರದಂದು ನಿಮಗೆ ಅನಿವಾರ್ಯ ಕಾರಣಗಳಿಂದಾಗಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ ಶ್ರಾವಣ ಮಾಸದ ಇತರ ಯಾವುದಾದರೊಂದು ಶುಕ್ರವಾರದೊಂದು ಈ ಪೂಜೆಯನ್ನು ಮಾಡಬಹುದು.  ವರಮಹಾಲಕ್ಷ್ಮೀ ಅನ್ನು ಪೂಜಿಸಲು ಯಾವುದೇ ಜಾತಿ-ಭೇದ, ಮೇಲು-ಕೀಳು ಎಂಬುದಿಲ್ಲ. ಭಕ್ತಿಯಿಂದ ಯಾರಾದರೂ ತಾಯಿ ವರಮಹಾಲಕ್ಷ್ಮೀಯನ್ನು ಪೂಜಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಬಹುದು.

ವರಮಹಾಲಕ್ಷ್ಮೀ ವ್ರತವನ್ನು ಹೇಗೆ ಮಾಡುವುದು?
>> ಮೊದಲಿಗೆ ವರಮಹಾಲಕ್ಷ್ಮೀ ವ್ರತದ ಹಿಂದಿನ ದಿನ ನಿಮ್ಮ ಮನೆ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು.
>> ಮನೆಯ ಬಾಗಿಲನ್ನು ಸ್ವಚ್ಚಗೊಳಿಸಿದ ಬಳಿಕ ಹೊಸ್ತಿಲಿಗೆ ಅರಿಶಿನ ಹಚ್ಚಿ. (ನಿಮ್ಮ ಹಿರಿಯರು ಅನುಸರಿಸುವ ಪದ್ಧತಿಯ ಪ್ರಕಾರ)
>> ಪೂಜೆಯ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಾವಿನ ಎಲೆಗಳಿಂದ ತೋರಣವನ್ನು ಕಟ್ಟಿ ಮನೆಯನ್ನು ಅಲಂಕರಿಸಬೇಕು.
>> ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಈಶಾನ್ಯ ಭಾಗವನ್ನು ಪೂಜೆಗೆ ಸಿದ್ಧಪಡಿಸಬೇಕು.
>> ಮೊದಲಿಗೆ ರಂಗೋಲಿ ಬಿಡಿಸಿ. ಅದರ ಮೇಲೆ ಬಾಳೆಎಲೆ ಇರಿಸಿ. ಬಳಿಕ ಬಾಳೆಎಲೆ ಮೇಲೆ ಅಕ್ಕಿಯನ್ನು ಹರಡಿ ಕಲಶ ಸ್ಥಾಪಿಸಿ. ಬಟ್ಟಲಿಗೆ ಅರಿಶಿನ-ಕುಂಕುಮವನ್ನು ಸಿಂಪಡಿಸಿ ಮತ್ತು ಅದರ ಮೇಲೆ ಲಕ್ಷ್ಮೀ ಸ್ವರೂಪವಾದ ತೆಂಗಿನಕಾಯಿಯನ್ನು ಇಡಿ. (ನೆನಪಿಡಿ ನಿಮ್ಮ ಮನೆಯಲ್ಲಿ ಕಲಶಕ್ಕೆ ತೆಂಗಿನಕಾಯಿ ಇಡುವ ಸಂಪ್ರದಾಯವಿದ್ದರೆ ಮಾತ್ರ ಈ ರೀತಿ ಕಲಶ ಸ್ಥಾಪಿಸಿ. ಇಲ್ಲವೇ ನಿಮ್ಮ ಮನೆಯ ಸಂಪ್ರದಾಯದಂತೆ ಕಲಶ ಸ್ಥಾಪಿಸಿ)
>> ಮಡಕೆಯ ಮೇಲೆ ಮಾವಿನ ಎಲೆಗಳೊಂದಿಗೆ ತೆಂಗಿನಕಾಯಿ ಇಡುವುದು ಕೂಡ ಮಂಗಳಕರ!
>> ಕಲಶದಲ್ಲಿ ನೀರನ್ನು ತುಂಬಿಸಿ ಕೆಲವರ ಮನೆಯಲ್ಲಿ ಕಲಶದಲ್ಲಿ ನೀರು ತುಂಬಿ ವಿಳ್ಳೆದೆಲೆ ಇರಿಸುತ್ತಾರೆ. ಮತ್ತೆ ಕೆಲವರು ಧಾನ್ಯಗಳನ್ನು ತುಂಬಿ ಕಲಶ ಇರಿಸುತ್ತಾರೆ. ನಿಮ್ಮ ಮನೆಯ ಸಂಪ್ರದಾಯದಂತೆ ಕಲಶದಲ್ಲಿ ಪದಾರ್ಥವನ್ನು ತುಂಬಿಡಿ.
>> ಕಲಶ ಸ್ಥಾಪನೆಯ ಬಳಿಕ ನಿಮ್ಮಿಷ್ಟದಂತೆ ತಾಯಿಯನ್ನು ಅಲಂಕರಿಸಿ. 

ಇದನ್ನೂ ಓದಿ-  ವರಮಹಾಲಕ್ಷ್ಮಿ ಹಬ್ಬಕ್ಕೆ ಈ ರೀತಿ ಸಿದ್ಧತೆ ಮಾಡಿಕೊಳ್ಳಿ...

ವರಮಹಾಲಕ್ಷ್ಮೀಗೆ (Varamahalakshmi) ಹೂಗಳೆಂದರೆ ಅಚ್ಚು ಮೆಚ್ಚು. ಅದರಲ್ಲೂ ಕಮಲದ ಹೂ ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ವರಮಹಾಲಕ್ಷ್ಮೀ ಅನ್ನು ಆರಾಧಿಸುವಾಗ.... 
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ... ಎಂದು ಭಕ್ತಿಯಿಂದ ಪೂಜಿಸಲಾಗುತ್ತದೆ.

ಪೂಜೆಗೆ ಹಸಿರು ಬಣ್ಣದ ರವಿಕೆ ಬಟ್ಟೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೆವೇದ್ಯಕ್ಕೆ ಸಜ್ಜಿಗೆ ಅಥವಾ ಹೆಸರು ಬೆಳೆ ಪಾಯಸ ತಯಾರಿಸಿ ಇಡಿ. ನಂತರ ಪುರೋಹಿತರು ಇಲ್ಲವೇ ನಿಮ್ಮ ಮನೆಯ ಹಿರಿಯರ ಮಾರ್ಗದರ್ಶನದಂತೆ ಪೂಜೆ ಮಾಡಿ. ವರಮಹಾಲಕ್ಷ್ಮೀ ಪೂಜೆಯಲ್ಲಿ ಶ್ಲೋಕಕ್ಕೆ ವಿಶೇಷ ಮಹತ್ವವಿದ್ದು ಬಹಳ ಮಂಗಳಕರವಾದ ಲಕ್ಷ್ಮೀ ಅಷ್ಟೋತ್ತರ ಮತ್ತು ಲಕ್ಷ್ಮೀ ಸಹಸ್ರನಾಮವನ್ನು ತಪ್ಪದೆ ಪಟಿಸಿ. 

ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ.

(ಪೂಜೆಗೆ ಸೂಕ್ತವಾದ ಒಂಬತ್ತು ತಿಂಡಿಗಳು: ಒಬ್ಬಟ್ಟು, ಸಿಹಿದೋಸೆ, ಮೆದುವಡೆ, ಶಂಕರಪಾಳೆ, ಸಕ್ಕರೆ ಪೊಂಗಲ್, ಸುಂದಲ್, ಮೋದಕ, ಹೆಸರು ಬೇಳೆ ಪಾಯಸ, ಸಜ್ಜಿಗೆ ಮತ್ತು ಲಡ್ಡು.)

ಇದನ್ನೂ ಓದಿ-  Varalakshmi Vrat 2021 : ವರ ಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ, ಮತ್ತು ಮಹತ್ವ ತಿಳಿಯಿರಿ

ವರಮಹಾಲಕ್ಷ್ಮೀ ಪೂಜೆಯಲ್ಲಿ ಅರಿಶಿನ ದಾರದ ಮಹತ್ವ: 
ವರಮಹಾಲಕ್ಷ್ಮೀ ವ್ರತ (Varamahalakshmi Vrat) ಆಚರಣೆ ಮಾಡುವ ಮಹಿಳೆಯರು ಒಂಬತ್ತು ಗಂಟಿನ ಎಳೆಯನ್ನು ತಯಾರಿಸಿ, ಮಧ್ಯದಲ್ಲಿ ಹೂವೊಂದು ಇರಿಸಿ ತಮ್ಮ ಬಲಗೈ ಮಣಿಕಟ್ಟಿನಲ್ಲಿ ಈ ಅರಿಶಿನದ ದಾರವನ್ನು ಕಟ್ಟಿಕೊಳ್ಳಬೇಕು. ಪೂಜೆ ಸಂಪನ್ನಗೊಳ್ಳುವವರೆಗೆ ಈ ದಾರವನ್ನು ಯಾವುದೇ ಕಾರಣಕ್ಕೂ ತೆಗೆಯಕೂಡದು. ಇದು ಪೂಜೆಯ ಒಂದು ಪ್ರಮುಖ ಭಾಗವಾಗಿದೆ.

ವರಮಹಾಲಕ್ಷ್ಮಿ ವ್ರತ ಪೂರ್ಣಗೊಂಡ ನಂತರ ಮುತ್ತೈದೆಯರಿಗೆ ಕುಂಕುಮ ನೀಡಿ. ತಾಂಬೂಲವನ್ನು ನೀಡಿ. (ಮುಸ್ಸಂಜೆ ಸಮಯದಲ್ಲಿ ಮುತ್ತೈದೆಯರಿಗೆ ಕುಂಕುಮ ನೀಡುವುದು ತುಂಬಾ ಶುಭ) ವರಮಹಾಲಕ್ಷ್ಮಿ ಪೂಜೆಯ ದಿನ ಸಸ್ಯಾಹಾರವನ್ನು ಮನೆಯಲ್ಲಿ ತಿನ್ನಬೇಕು.  ತಾಯಿಯ ಪೂಜೆ ಮುಗಿದ ನಂತರವೂ ಯಾವುದೇ ಸಂದರ್ಭದಲ್ಲಿ ಲಕ್ಷ್ಮಿದೇವಿಗೆ ಅವಮಾನವಾಗುವಂತಹ ಯಾವುದೇ ಘಟನೆಯಗಳು ಮನೆಯಲ್ಲಿ ನಡೆಯದಂತೆ ನಿಗಾವಹಿಸಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News