ಸಂಕಷ್ಟ ಸೂತ್ರವೇ ಇಲ್ಲ ಎಂದ ಮೇಲೆ ಕಾವೇರಿ ನೀರು ಬಿಟ್ಟಿದ್ದೇಕೆ? ಸಿಎಂ ವಿರುದ್ಧ ಎಚ್‌ಡಿ‌ಕೆ ಕಿಡಿ

ಸಂಕಷ್ಟ ಸೂತ್ರವನ್ನು ರೂಪಿಸಬೇಕಾದವರು ಯಾರು? ಅದಕ್ಕೆ ರಾಜ್ಯ ಮಾಡಬೇಕು ಎಂದು ಆಲೋಚನೆ ಮಾಡದೆ ಹೇಳಿಕೆಗಳನ್ನು ಕೊಡುತ್ತಿದ್ದರೆ ಉಪಯೋಗ ಏನು? ಸಂಕಷ್ಟ ಸೂತ್ರ ರಚನೆಗೆ ಇಷ್ಟು ಹೊತ್ತಿಗೆ ರಾಜ್ಯ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಿತ್ತು. 

Written by - Yashaswini V | Last Updated : Sep 20, 2023, 02:08 PM IST
  • ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ನಿಯಂತ್ರಣ ಸಮಿತಿಯವರು ದೇವಲೋಕದಿಂದ ಇಳಿದು ಬಂದಿದ್ದಾರೆಯೇ?
  • ಅವರು ನಾವು ನೇಮಕ ಮಾಡಿಕೊಂಡ ಸದಸ್ಯರೆಲ್ಲವೇ?
  • ಈಗ ನೋಡಿದರೆ ನಮ್ಮ ರಾಜ್ಯದ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ- ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ
ಸಂಕಷ್ಟ ಸೂತ್ರವೇ ಇಲ್ಲ ಎಂದ ಮೇಲೆ ಕಾವೇರಿ ನೀರು ಬಿಟ್ಟಿದ್ದೇಕೆ? ಸಿಎಂ ವಿರುದ್ಧ ಎಚ್‌ಡಿ‌ಕೆ ಕಿಡಿ  title=

Cauvery Water: ಕಾವೇರಿ ನೀರು ಹಂಚಿಕೆಯ ಬಗ್ಗೆ ಸಂಕಷ್ಟ ಸೂತ್ರವೇ ಇಲ್ಲದಿರುವಾಗ ರಾಜ್ಯದ ಜನತೆಗೇ ನೀರಿಲ್ಲದ ಈ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ಅವರು ಮಾಧ್ಯಮಗಳ ಜತೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಕಷ್ಟ ಸೂತ್ರವನ್ನು ರೂಪಿಸಬೇಕಾದವರು ಯಾರು? ಅದಕ್ಕೆ ರಾಜ್ಯ ಮಾಡಬೇಕು ಎಂದು ಆಲೋಚನೆ ಮಾಡದೆ ಹೇಳಿಕೆಗಳನ್ನು ಕೊಡುತ್ತಿದ್ದರೆ ಉಪಯೋಗ ಏನು? ಸಂಕಷ್ಟ ಸೂತ್ರ ರಚನೆಗೆ ಇಷ್ಟು ಹೊತ್ತಿಗೆ ರಾಜ್ಯ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಿತ್ತು. ಅದಕ್ಕೆ ನಾವು ಮಾಡಿದ್ದೇವೆ? ಆ ಬಗ್ಗೆ ಸರಕಾರ ಚಿಂತನೆ ಮಾಡಬೇಕು, ಅಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ನಿಯಂತ್ರಣ ಸಮಿತಿಯವರು ದೇವಲೋಕದಿಂದ ಇಳಿದು ಬಂದಿದ್ದಾರೆಯೇ? ಅವರು ನಾವು ನೇಮಕ ಮಾಡಿಕೊಂಡ ಸದಸ್ಯರೆಲ್ಲವೇ? ಈಗ ನೋಡಿದರೆ ನಮ್ಮ ರಾಜ್ಯದ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ- ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ: ಸಿಎಂ ಸಿದ್ದರಾಮಯ್ಯ

ನಮ್ಮ ಅಧಿಕಾರಿಗಳ ಕೆಲಸವೋ ದೇವರಿಗೆ ಪ್ರೀತಿ. ದೆಹಲಿಯಲ್ಲಿ ನಡೆಯುವ ಸಭೆಗಳಿಗೆ ಮಾಹಿತಿ, ಅಂಕಿ ಅಂಶಗಳ ಸಮೇತ ಹೋಗಿ ಕೂತು ಚರ್ಚೆ ಮಾಡುವುದು ಬಿಟ್ಟು ಇಲ್ಲಿಂದಲೇ ವರ್ಚುಯಲ್ ಆಗಿ ಹಾಜರಾಗುತ್ತಾರೆ. ತಮಿಳುನಾಡಿನಿಂದ ಹದಿನೈದು ಜನ ಅಧಿಕಾರಿಗಳು ಹೋಗುತ್ತಾರೆ. ಇದರಿಂದ ರಾಜ್ಯಕ್ಕೆ ನ್ಯಾಯ ಸಿಗಲು ಸಾಧ್ಯವೇ? ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಸಂಸದರ ಸಭೆ ಕರೆದು ಇವತ್ತು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಏನು ಚರ್ಚೆ ಮಾಡಿದರು, ಇವರೇನು ಹೇಳಿದರು ಎನ್ನುವ ಮಾಹಿತಿಯೂ ನನಗೆ ಇದೆ. ಹೊರ ನೋಟಕ್ಕೆ ನಾವು ಒಗ್ಗಟ್ಟಾಗಿದ್ದೇವೆ ಎಂದು ಬರೀ ಹೇಳಿಕೆ ಕೊಟ್ಟರೆ ಪ್ರಯೋಜನ ಏನಿದೆ? ಅಲ್ಲಿ ಸಂಸದರನ್ನು ಕೂರಿಸಿಕೊಂಡು ಭಾಷಣ ಮಾಡಲಿಕ್ಕೆ ಹೋಗಿದ್ದರಾ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೆಲ್ಲಾ ಗೊತ್ತಿದ್ದರೂ ಸಭೆಯಲ್ಲಿ ಭಾಷಣ ಮಾಡಲಿಕ್ಕೆ ರಾತ್ರೋರಾತ್ರಿ ತರಾತುರಿಯಲ್ಲಿ ಇವರೆಲ್ಲ ದೆಹಲಿಗೆ ಹೋಗಬೇಕಿತ್ತ? ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿ, ರಾಜ್ಯ ವಾಸ್ತವ ಪರಿಸ್ಥಿತಿಯನ್ನು ವಿವರಿಸುವುದು ಬಿಟ್ಟು, ಆ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವುದು ಬಿಟ್ಟು, ಅರ್ಜಿ ಸಲ್ಲಿಸುವುದಕ್ಕೆ ಆಲೋಚನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಅಣೆಕಟ್ಟೆಯಲ್ಲಿ ನೀರೆಲ್ಲ ಖಾಲಿಯಾದ ಮೇಲೆ ಇವರು ಕ್ರಮ ಕೈಗೊಳ್ಳುತ್ತಾರೆಯೇ? ಎಂದು ರಾಜ್ಯ ಸರ್ಕಾರವನ್ನು ಅವರು ಖಾರವಾಗಿ ಪ್ರಶ್ನಿಸಿದರು.

ನೀರಾವರಿ ಬಗ್ಗೆ ಇವರಿಗೆ ತಿಳಿವಳಿಕೆ ಇಲ್ಲದಿದ್ದರೆ ಕೊನೆಪಕ್ಷ ಈ ಬಗ್ಗೆ ಗೊತ್ತಿರುವವರ ಸಲಹೆಯನ್ನಾದರೂ ಪಡೆದು ಹೆಜ್ಜೆ ಇಡಬೇಕಿತ್ತು ಎಂದವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಇದನ್ನೂ ಓದಿ- ಕಾವೇರಿ ನೀರು ವಿವಾದ: ಪ್ರಧಾನಿ ಜೊತೆ ಚರ್ಚೆಗೆ ಬಿಜೆಪಿ ಮುಖಂಡರು ಸಮಯ ನಿಗದಿಪಡಿಸಲಿ- ಸಚಿವ ಎಂ.ಬಿ ಪಾಟೀಲ ಆಗ್ರಹ

ಬರದ ಬಗ್ಗೆಯೂ ನಿರ್ಲಕ್ಷ್ಯ:
ರಾಜ್ಯದಲ್ಲಿ ಸರಕಾರ ಬರ ಇದೆ, 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಸ್ವತಃ ಕಂದಾಯ ಸಚಿವರೇ ಹೇಳಿದ್ದಾರೆ. ಆದರೆ ಇಷ್ಟು ದಿನ ಸರಕಾರ ಮಾಡಿದ್ದೇನು? ಕಳೆದ ಒಂದು ತಿಂಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ, ಕೇಂದ್ರ ಸರಕಾರಕ್ಕೆ ಅರ್ಜಿ ಕೊಡುತ್ತೇವೆ, ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದೆಲ್ಲಾ ಎಂದು ಕಾಲಹರಣ ಮಾಡಿಕೊಂಡು ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅಷ್ಟೇ. ಆದರೆ, ಬರ ಮಾತ್ರ ಹಾಗೆಯೇ ಇದೆ, ಅದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ. 6 ಸಾವಿರ ಕೋಟಿ ಮೌಲ್ಯದ ಬೆಳೆ ನಾಶ ಅಂದರೆ ಹುಡುಗಾಟವೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಟೀಕಾ ಪ್ರಹಾರ ನಡೆಸಿದರು.

ಸಮಯ ಪೋಲು ಮಾಡುವುದು ಬಿಟ್ಟು ದೆಹಲಿಗೆ ರಾಜ್ಯದ ನಿಯೋಗವನ್ನು ಕರೆದುಕೊಂಡು ಹೋಗಿ ಅರ್ಜಿ ಕೊಡಬೇಕಿತ್ತು. ಕೇಂದ್ರ ತಂಡವನ್ನು ಕರೆಸಿ ಪರಿಶೀಲನೆ ನಡೆಸಬೇಕಿತ್ತು. ಕೇಂದ್ರದಿಂದ ನೆರವು ಪಡೆಯಬೇಕಿತ್ತು. ಅದು ಬಿಟ್ಟು ಇವರ ಕಾರ್ಯಗಳೆಲ್ಲ ಕೇವಲ ಮಾತಿಗೆ ಸೀಮಿತ ಆಗಿವೆ. 195 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ಹೇಳಿಕೊಂಡು ಇನ್ನೂ ಮಾಹಿತಿ ತರಿಸಿಕೊಳ್ಳುವುದರಲ್ಲಿಯೇ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News